ಬೆಂಗಳೂರು, ಫೆ.05 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಸದಸ್ಯ ಬಸನಗೌಡ ಯತ್ನಾಳ ಅವರ ನಡುವೆ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಶುಕ್ರವಾರ ಜಟಾಪಟಿ ನಡೆಯಿತು.
ಸಿಎಂ ಬಿಎಸ್ವೈ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಉತ್ತರ ನೀಡಿ ಕುಳಿತಿದ್ದರು. ಈ ಸಂದರ್ಭ ಯತ್ನಾಳ್ ಅವರು, "ಪಂಚಮಸಾಲಿ ಸಮುದಾಯಕ್ಕೆ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದು, ಆದರೆ, ಸಿಎಂ ಬಿಎಸ್ವೈ ಅವರು ಈ ವಿಚಾರದ ಬಗ್ಗೆ ಉತ್ತರಿಸಿಲ್ಲ" ಎಂದರು.
ಈ ವೇಳೆ ಯತ್ನಾಳ್ ಅವರ ಮಾತಿಗೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, "ಸರ್ಕಾರದ ಉತ್ತರದ ಬಗ್ಗೆ ಈಗ ವಿಪಕ್ಷ ನಾಯಕರು ಸೃಷ್ಟೀಕರಣ ಕೇಳುತ್ತಿದ್ದು, ನಿಮಗೆ ಮತ್ತೆ ಅವಕಾಶ ಕಲ್ಪಿಸುತ್ತೇನೆ" ಎಂದರು.
"ನೀವು ಮತ್ತೆ ಕಲಾಪವನ್ನು ಮುಂದೂಡಿ ಹೋಗುತ್ತೀರಿ. ನಮ್ಮ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ. ನಮ್ಮ ಪ್ರಶ್ನೆಗೆ ಸಿಎಂ ಅವರು ಈಗಲೇ ಉತ್ತರ ನೀಡಬೇಕು" ಎಂದು ಯತ್ನಾಳ್ ಆಗ್ರಹಿಸಿದರು.
ಈ ವೇಳೆ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಿಎಸ್ವೈ ಅವರು, "ನಮ್ಮದು ಪ್ರಾದೇಶಿಕ ಪಕ್ಷ ಅಲ್ಲ. ಬದಲಾಗಿ ರಾಷ್ಟ್ರೀಯ ಪಕ್ಷ. ಈ ರೀತಿಯಾದ ವಿಚಾರಗಳ ಬಗ್ಗೆ ಏಕಾಏಕಿ ನಿರ್ಧಾರಗಳನ್ನು ಕೈಗೊಳ್ಳಲು ಆಗುವುದಿಲ್ಲ. ಈ ವಿಷಯದ ಬಗ್ಗೆ ಪ್ರಧಾನಿ, ಗೃಹ ಸಚಿವರು ಸೇರಿದಂತೆ ಕೇಂದ್ರ ಪ್ರಮುಖರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಹೇಳಿದರು.
"ಈ ವಿಚಾರದ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು" ಎಂದು ಯತ್ನಾಳ್ ಹೇಳಿದರು.
"ರಾಜ್ಯದಲ್ಲಿ ನಮ್ಮ ಪಕ್ಷದ 25 ಸಂಸದರು ಇದ್ದಾರೆ. ಕೇಂದ್ರಕ್ಕೆ ಅವರ ನಿಯೋಗವನ್ನು ಕರೆದುಕೊಂಡು ಹೋಗಿ ಪರಿಹಾರ ಕಂಡುಕೊಳ್ಳಿ" ಎಂದು ಬಿಎಸ್ವೈ ತಿಳಿಸಿದರು.
"ನಮ್ಮ ಸಮುದಾಯವನ್ನು ಅವಕಾಶವಂಚಿತರನ್ನಾಗಿಸುವ ಷಡ್ಯಂತ್ರವಿದೆ" ಎಂದು ಯತ್ನಾಳ್ ಆಗ್ರಹಿಸಿದರು.