ಬೆಂಗಳೂರು, ಫೆ.05 (DaijiworldNews/PY): "ಫೆ.9ರಂದು ವಿಧಾನ ಪರಿಷತ್ ನೂತನ ಸಭಾಪತಿಯ ಆಯ್ಕೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಫೆ. 8ರಂದು ನಡೆಯಲಿದೆ" ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಹೇಳಿದರು.
ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನೆಲೆ, ಈ ಹಿಂದೆ ಸಭಾಪತಿಯಾಗಿದ್ದ ಪ್ರತಾಪಚಂದ್ರ ಶೆಟ್ಟಿ ಅವರು ಚರ್ಚೆ ಅವಕಾಶ ಕಲ್ಪಿಸದೇ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದರು.
ನೂತನ ಸಭಾಪತಿಯಾಗಿ ಬಿಜೆಪಿ ಬೆಂಬಲದಲ್ಲಿ ಜೆಡಿಎಸ್ನ ಬಸವರಾಜ ಹೊರಟ್ಟಿ ಅವರು ಆಯ್ಕೆಯಾಗುವುದು ಖಚಿತವಾಗಿದೆ.
ಶುಕ್ರವಾರ ಬೆಳಗ್ಗೆ ವಿಧಾನ ಪರಿಷತ್ನ ಕಲಾಪ ಸಲಹಾ ಸಮಿತಿ ಸಭೆಯು ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಫೆ.10ರವರೆಗೆ ಕಲಾಪವನ್ನು ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.