ಚೆನ್ನೈ, ಫೆ.05 (DaijiworldNews/PY): 12,100 ಕೋಟಿ. ರೂ ಮೊತ್ತದ ಕೃಷಿ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ತಮಿಳುನಾಡು ಸರ್ಕಾರ ಘೋಷಣೆ ಮಾಡಿದೆ.
"ಈ ಸಾಲ ಮನ್ನಾ ಯೋಜನೆಯಿಂದ ರಾಜ್ಯದ 16.43 ಲಕ್ಷ ರೈತರಿಗೆ ಲಾಭವಾಗಲಿದೆ. ತಕ್ಷಣದಿಂದ ಈ ಯೋಜನೆಯು ಜಾರಿಗೆ ಬರಲಿದೆ. ಶೀಘ್ರದಲ್ಲೇ ಅವಶ್ಯವಿರುವ ಅನುದಾನವನ್ನು ಒದಗಿಸಲಾಗುವುದು" ಎಂದು ವಿಧಾನಸಭೆಯಲ್ಲಿ ಸಿಎಂ ಕೆ.ಪಳನಿಸ್ವಾಮಿ ಅವರು ತಿಳಿಸಿದರು.
"ಎಐಎಡಿಎಂಕೆವು, ನೀಡಿರುವ ಭರವಸೆಗಳನ್ನು ಈಡೇರಿಸುವುದರೊಂದಿಗೆ ನೂತನ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಏಕೈಕ ಪಕ್ಷವಾಗಿದೆ" ಎಂದು ಹೇಳಿದರು.
ಡಿಎಂಕೆ ವಿರುದ್ದ ವಾಗ್ದಾಳಿ ನಡೆಸಿರುವ ಅವರು, "ಡಿಎಂಕೆ ಪಕ್ಷವು, ಅರ್ಹ ರೈತರಿಗೆ ತಲಾ 2 ಎಕರೆ ಜಮೀನನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ನೀಡಿರುವ ಭರವಸೆಯನ್ನು ಈಡೇರಸಲು ಅದು ವಿಫಲವಾಗಿದೆ" ಎಂದರು.