ನವದೆಹಲಿ, ಫೆ.05 (DaijiworldNews/PY): ಅನುಮತಿ ಇಲ್ಲದೇ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ.
ಅರ್ಜಿ ಹಿಂಪಡೆಯಲು ಮುಖ್ಯ ನ್ಯಾ.ಎಸ್.ಎ.ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠ ಅನುವು ಮಾಡಿಕೊಟ್ಟಿದೆ.
ಮುಂಬೈ ಮಹಾನಗರದ ಜುಹು ಪ್ರದೇಶದಲ್ಲಿನ ತನ್ನ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆಯೇ ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಆರೋಪದಡಿ ಬಿಎಂಸಿ ಸೋನು ಸೂದ್ ಅವರಿಗೆ ನೋಟಿಸ್ ನೀಡಿತ್ತು. ಇದನ್ನು ರದ್ದುಪಡಿಸಬೇಕೆಂದು ಕೋರಿ ಸೂದ್ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಸೋನು ಸೂದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಬಾಂಬೆ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಸೂದ್ ಸುಪ್ರೀಂ ಮೆಟ್ಟಿಲೇರಿದ್ದರು.