ನವದೆಹಲಿ, ಫೆ.05 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ಮುಂದುವರೆಯದಂತೆ ದೆಹಲಿ ಗಡಿಗಳಲ್ಲಿ ಮೊಳೆಗಳನ್ನು ಹೊಡೆಯಲಾಗಿದೆ, ರೈತರ ಪ್ರತಿಭಟನೆ ನಡೆಯುತ್ತಿರುವ ದೆಹಲಿ ಗಡಿಗಳಲ್ಲಿ ಕೈಗೊಂಡಷ್ಟು ಕ್ರಮಗಳನ್ನು ಸರ್ಕಾರ ಪಾಕಿಸ್ತಾನ ಗಡಿಯಲ್ಲೂ ಕೈಗೊಂಡಿಲ್ಲ" ಎಂದು ಬಿಎಸ್ಪಿ ಸಂಸದ ಸತೀಶ್ ಮಿಶ್ರಾ ಹೇಳಿದ್ದಾರೆ.
ಈ ಕುರಿತು ಸದನದಲ್ಲಿ ಮಾತನಾಡಿದ ಅವರು, "ಅನ್ನದಾತರನ್ನು ದೇಶದ ವೈರಿಗಳೆಂದು ಬಿಂಬಿಸಲಾಗುತ್ತಿದ್ದು, ಈ ಕೂಡಲೇ ಸ್ವಪ್ರತಿಷ್ಠೆ ಬಿಟ್ಟು ಮೂರೂ ವಿವಾದಿತ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು "ರೈತರ ಹೋರಾಟವನ್ನು ನಿಗ್ರಹಿಸಲು ನೀವು ಕಂದಕಗಳನ್ನು ತೋಡಿದ್ದು, ನೀವು ಅದನ್ನು ಅವರಿಗಾಗಿ ಮಾಡಿಲ್ಲ, ನಿಮಗೆ ನೀವೇ ಕಂದಕ ತೋಡಿಕೊಂಡಿದ್ದೀರಿ. ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ ಎಂಬುದನ್ನು ಯೋಚಿಸದೆ ಆ ಪ್ರದೇಶದಲ್ಲಿ ನೀರು, ವಿದ್ಯುತ್ ಸರಬರಾಜು ಮತ್ತು ಶೌಚಾಲಯಗಳನ್ನು ತೆಗೆದಿದ್ದೀರಿ. ಇದು ಮಾನವ ಹಕ್ಕುಗಳ ಉಲ್ಲಂಘನೆ" ಎಂದು ಹೇಳಿದ್ದಾರೆ.
ಈ ಮಧ್ಯೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಸಚಿವ ಧರ್ಮೇಂದ್ರ ಪ್ರಧಾನ್, "ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಮತ್ತು ಅವರ ಆದಾಯವನ್ನು ಹೆಚ್ಚಿಸಲು ಕಾಯ್ದೆಗಳು ಸಹಾಯ ಮಾಡುತ್ತವೆ" ಎಂದರು.