ಬೆಂಗಳೂರು, ಫೆ.05 (DaijiworldNews/HR): ವಸತಿ ಯೋಜನೆ ವಿಚಾರದಲ್ಲಿ ವಸತಿ ಸಚಿವ ವಿ.ಸೋಮಣ್ಣ ಹಾಗೂ ಭಾಲ್ಕಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ನಡುವೆ ಮಾತಿನ ಸಮರ ಹಾಗೂ ವೈಯಕ್ತಿಕ ಟೀಕೆಗಳು ಸದನದಲ್ಲಿ ನಡೆದಿದೆ.
ವಿ.ಸೋಮಣ್ಣ ಅವರು ನನ್ನಿಂದ ತಪ್ಪಾಗಿದ್ದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಸವಾಲು ಹಾಕಿದ್ದು, ಆಗ ಈಶ್ವರ್ ಖಂಡ್ರೆ ನಾನು ತಪ್ಪು ಮಾಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಈ ನಡುವೆ ನಾನು ಟೋಪಿ ಹಾಕಿ ಗೋಲ್ ಮಾಲ್ ಮಾಡಿ ಬಂದವನಲ್ಲ ಎಂದು ಸೋಮಣ್ಣ ಹೇಳಿದಾಗ, ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿದ್ದೇನೆ. ನಿಮ್ಮ ಹಿನ್ನೆಲೆ ಏನು ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು. ಇದು ಸದನದಲ್ಲಿ ಕೆಲಹೊತ್ತು ಬಿಸಿ ವಾತಾವರಣಕ್ಕೂ ಕಾರಣವಾಯಿತು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಈಶ್ವರ್ ಖಂಡ್ರೆ, ಹಿಂದಿನ ಸರ್ಕಾರದಲ್ಲಿ ಮಂಜೂರಾದ ಮನೆಗಳು ಪೂರ್ಣಗೊಳ್ಳಲು ಹಣ ಪಾವತಿ ಮಾಡಿಲ್ಲ ಎಂದಿದ್ದು, ಇದಕ್ಕೆ ವಸತಿ ಸಚಿವ ವಿ.ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಸರ್ಕಾರದಲ್ಲಿ ಆಗಿದ್ದ ಅಕ್ರಮ ಸರಿಪಡಿಸಿದ್ದೇವೆ. ಭಾಲ್ಕಿಯಲ್ಲಿ 17 ಸಾವಿರ ಮನೆಗಳು ಮಂಜೂರಾಗಿದ್ದು ಶೇ.43 ರಷ್ಟು ಬೋಗಸ್ ಆಗಿವೆ. ಶಾಸಕರೇ ಆದೇಶ ಪತ್ರ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.