ಗಾಜಿಪುರ,ಫೆ.05 (DaijiworldNews/HR): "ಫೆಬ್ರವರಿ 6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ (ರಸ್ತೆ ದಿಗ್ಭಂಧನ) ಪ್ರತಿಭಟನೆ ನಡೆಯಲಿದೆ" ಎಂದು ಭಾರತೀಯ ಕಿಸಾನ್ ಒಕ್ಕೂಟ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಮೂರು ಗಂಟೆಗಳ ಕಾಲ ರಸ್ತೆ ದಿಗ್ಭಂಧನ ಹೇರಲಾಗುವುದು. ಇದು ದೆಹಲಿಯಲ್ಲಿ ನಡೆಯುವುದಿಲ್ಲ. ಆದರೆ ದೇಶದ ಇತರೆ ಭಾಗಗಳಲ್ಲಿ ಚಕ್ಕಾ ಜಾಮ್ ಹಮ್ಮಿಕೊಳ್ಳಲಾಗುವುದು. ಚಕ್ಕಾ ಜಾಮ್ನಲ್ಲಿ ಸಿಲುಕುವ ವಾಹನಗಳಿಗೆ ನೀರು ಹಾಗೂ ಆಹಾರ ಮತ್ತು ಕಡಲೆಕಾಯಿಯಂತಹ ವಸ್ತುಗಳನ್ನು ವಿತರಿಸಲಾಗುವುದು ಜೊತೆಗೆ ಸರ್ಕಾರ ಜನರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು" ಎಂದರು.
2020 ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದು, ಈ ನಡುವೆ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್ನಲ್ಲಿ ಹಿಂಸಾಚಾರ ನಡೆದಿತ್ತು.
ಇನ್ನು ರೈತರು ಹಾಗೂ ಸರ್ಕಾರದ ಜೊತೆಗಿನ ಮುಂದಿನ ಹಂತದ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ಈ ಸಂಬಂಧ ರೈತರ ಸಂಘಗಳ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.