ಬೆಂಗಳೂರು, ಫೆ.05 (DaijiworldNews/HR): "ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳ ಸಹಿತ ವಿವಿಧ ಶಸ್ತ್ರಾಸ್ತ್ರಗಳನ್ನು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಪೂರೈಕೆ ಮಾಡಲು ಭಾರತ ಸಿದ್ಧವಿದೆ" ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ನಡೆದ ಹಿಂದೂ ಮಹಾ ಸಾಗರ ಪ್ರದೇಶ (ಇಂಡಿಯನ್ ಓಶನ್ ರೀಜನ್-ಐಒಆರ್)ದ ದೇಶಗಳ ರಕ್ಷಣ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, "ಹಿಂದೂ ಮಹಾಸಾಗರ ಪ್ರದೇಶದಲ್ಲಿರುವ ಬಹುತೇಕ ದೇಶಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗುತ್ತಿದ್ದು, ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪ್ರಾದೇಶಿಕ ಸಹಭಾಗಿತ್ವದಿಂದ ನಾವು ಇನ್ನಷ್ಟು ಬಲ ಪಡೆಯಲು ಸಾಧ್ಯ. ಭಾರತವು ಹಿಂದೂ ಮಹಾಸಾಗರ ವ್ಯಾಪ್ತಿಯ ದೇಶಗಳಿಗೆ ಕ್ಷಿಪಣಿ ವ್ಯವಸ್ಥೆ, ಲಘು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್, ಬಹೂಪಯೋಗಿ ಲಘು ಸಾಗಣೆ ವಿಮಾನ, ಯುದ್ಧ ಮತ್ತು ಗಸ್ತು ನೌಕೆಗಳು, ಆರ್ಟಿಲರಿ ಗನ್ ವ್ಯವಸ್ಥೆ, ಟ್ಯಾಂಕ್ಗಳು, ರಾಡಾರ್ಗಳು, ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳು ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಸರಬರಾಜು ಮಾಡಲು ಸಿದ್ದವಿದೆ" ಎಂದರು.
ಇನ್ನು ಹಿಂದೂ ಮಹಾಸಾಗರ ಪ್ರದೇಶದ ದೇಶಗಳ ಸುಸ್ಥಿರ ಪ್ರಗತಿ ಮತ್ತು ಅಭಿವೃದ್ಧಿಗೆ ನೌಕಾ ಸಂಪನ್ಮೂಲ ಅತ್ಯಂತ ಪ್ರಮುಖವಾಗಿದ್ದು, ನಾವು ಹಿಂದೂ ಮಹಾಸಾಗರ ವ್ಯಾಪ್ತಿಯ ನೌಕಾ ಪ್ರದೇಶವು ಶಾಂತಿಯುತವಾಗಿರುವಂತೆ ಮತ್ತು ಎಲ್ಲ ದೇಶಗಳಿಗೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು" ಎಂದು ಹೇಳಿದ್ದಾರೆ.