ನವದೆಹಲಿ,ಫೆ.04 (DaijiworldNews/HR): ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹವ್ಯಾಸಿ ಪತ್ರಕರ್ತ ಮನ್ದೀಪ್ ಪುನಿಯಾ ಅವರಿಗೆ ನ್ಯಾಯಾಲಯದಿಂದ ಜಾಮೀನು ದೊರಕಿದ್ದು, ಬುಧವಾರದಂದು ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.
ಮನ್ದೀಪ್ ಪುನಿಯಾ ಅವರಿಗೆ ನ್ಯಾಯಾಲಯವು 25 ಸಾವಿರ ವೈಯಕ್ತಿಕ ಬಾಂಡ್ ಪಡೆದು ಜಾಮೀನು ನೀಡಿದೆ ಎನ್ನಲಾಗಿದೆ.
ಇನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾನುವಾರ ಅವರನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು.
ಬಿಡುಗಡೆ ಬಳಿಕ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪುನಿಯಾ, "ತಿಹಾರ್ ಜೈಲಿನಲ್ಲಿ ನನಗೆ ರೈತರೊಂದಿಗೆ ಮಾತನಾಡುವ ಅವಕಾಶ ದೊರಕಿದ್ದು, ರೈತರು ವಿವರಗಳ ಟಿಪ್ಪಣಿಯನ್ನು ನನ್ನ ಕಾಲುಗಳ ಮೇಲೆ ಬರೆದು ಕಳುಹಿಸಿದ್ದಾರೆ. ಎಲ್ಲವನ್ನೂ ವಿವರವಾಗಿ ವರದಿ ಮಾಡುವೆ. ತಳಮಟ್ಟದಿಂದ ವರದಿ ಮಾಡುವುದು ನನ್ನ ಕೆಲಸ. ನೀವು ಹೇಗೆ ಮತ್ತು ಯಾಕಾಗಿ ಬಂಧನಕ್ಕೆ ಒಳಗಾಗಿದ್ದು ಎಂದು ರೈತರಿಂದ ಮಾಹಿತಿಯನ್ನು ಪಡೆದುಕೊಂಡಿರುತ್ತೇನೆ" ಎಂದು ಹೇಳಿದ್ದಾರೆ.