ಬೆಂಗಳೂರು, ಫೆ.04 (DaijiworldNews/PY): ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ -2021ರಲ್ಲಿ ಪಾಲ್ಗೊಳ್ಳುವುದಕ್ಕೆ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎನ್ನುವ ಪ್ರಮಾಣಪತ್ರವನ್ನು ಹೊಂದಿರಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.
ಗುರುವಾರ ಆದೇಶ ನೀಡಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, "ವೈಮಾನಿಕ ಪ್ರದರ್ಶನದ ಪ್ರದೇಶದಲ್ಲಿ ಪ್ರವಾಸಿಗರು ಪರಸ್ಪರ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನುಕೂಲಕರವಾಗಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಕೊರೊನಾ ವ್ಯಾಪಿಸದಂತೆ ನಿಯಂತ್ರಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆ ಪ್ರದರ್ಶನಕ್ಕೆ ಬರುವವರು ಕೊರೊನಾ ಸೋಂಕು ಇಲ್ಲ ಎನ್ನುವ ಪ್ರಮಾಣಪತ್ರವನ್ನು ಹೊಂದಿರಬೇಕಿಲ್ಲ" ಎಂದು ತಿಳಿಸಿದೆ.
ಕೊರೊನಾ ಪರೀಕ್ಷೆಯ ಪ್ರಮಾಣಪತ್ರವನ್ನು ಕಡ್ಡಾಯ ಮಾಡಿದ ಕಾರಣ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಪ್ರದರ್ಶನದ ಎರಡನೇ ದಿನ ಸೀಮಿತ ಸಂಖ್ಯೆಯ ಪ್ರೇಕ್ಷಕರು ಭಾಗವಹಿಸಿದ್ದರು.