ನವದೆಹಲಿ, ಫೆ.04 (DaijiworldNews/HR): "ಈ ಬಾರಿ ಕೇಂದ್ರ ಸರ್ಕಾರದ ಆನ್ಲೈನ್ ವೇದಿಕೆಯಲ್ಲಿ 22 ಲಕ್ಷಕ್ಕೂ ಅಧಿಕ ಸಾರ್ವಜನಿಕ ಕುಂದುಕೊರತೆಗಳ ಅರ್ಜಿ ಬಂದಿದ್ದು, ಇದು ಮೂರು ವರ್ಷಗಳಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ" ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಈ ಕುರಿತು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು," 2020ರಲ್ಲಿ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿರ್ವಹಣೆ ವ್ಯವಸ್ಥೆಗೆ ಒಟ್ಟು 22,71,270 ಕುಂದುಕೊರತೆಗಳು ವರದಿಯಾಗಿದ್ದು, 2019 ರಲ್ಲಿ 18,67,758 ಮತ್ತು 2018ರಲ್ಲಿ 15,86,415 ಕುಂದುಕೊರತೆಗಳು ವರದಿಯಾಗಿದ್ದವು" ಎಂದು ತಿಳಿಸಿದ್ದಾರೆ.
ಇನ್ನು "2020ರಲ್ಲಿ 23,19,569 ಅರ್ಜಿಗಳ ವಿಲೇವಾರಿ ಮಾಡಲಾಗಿದ್ದು, 2019 ರಲ್ಲಿ 16,39,856 ಮತ್ತು 2018ರಲ್ಲಿ 15,05,950 ಕುಂದುಕೊರತೆಗಳನ್ನು ಬಗೆಹರಿಸಲಾಗಿದೆ. 2020ರಲ್ಲಿ ವರದಿಯಾದ ಕೊಂದುಕೊರತೆಗಳಲ್ಲಿ 10,23,300 ಬಾಕಿ ಉಳಿದಿವೆ" ಎಂದು ಹೇಳಿದ್ದಾರೆ.
"ಸಿಪಿಜಿಆರ್ಎಎಂಎಸ್ ವರದಿಯಾಗುವ ಕುಂದುಕೊರತೆಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಸಚಿವಾಲಯದ ಅಧಿಕಾರಿಗಳು ಪರಿಶೀಲಿಸಿ, ಅವುಗಳನ್ನು ಬಗೆಹರಿಸುತ್ತಾರೆ" ಎಂದು ಅವರು ತಿಳಿಸಿದರು.