ನವದೆಹಲಿ, ಫೆ.04 (DaijiworldNews/PY): "2022ರ ಗಣರಾಜ್ಯೋತ್ಸವ ಪರೇಡ್ ಸೆಂಟ್ರಲ್ ವಿಸ್ಟಾ ಅವೆನ್ಯೂನಲ್ಲಿ ನಡೆಯಲಿದೆ" ಎಂದು ವಸತಿ ಹಾಗೂ ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರ ಹರ್ದೀಪ್ ಸಿಂಗ್ ಪುರಿ ಹೇಳಿದರು.
ಸೆಂಟ್ರಲ್ ವಿಸ್ಟಾ ಅವೆನ್ಯೂಗೆ ಇಂಡಿಯಾ ಗೇಟ್ ಬಳಿ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, "ಸೆಂಟ್ರಲ್ ವಿಸ್ಟಾ ಅವೆನ್ಯೂ ಆಧುನಿಕ ಭಾರತದ ಸಂಕೇತವಾಗಲಿದೆ. ಕೆಲವರಿಗೆ ಅದ ಪ್ರಾಮುಖ್ಯತೆ ಅರ್ಥವಾಗುವುದಿಲ್ಲ. ಕೆಲವರು ದೇಶದ ಪ್ರಗತಿ ಬಯಸುವುದಿಲ್ಲ. ಈ ಹಿಂದೆ ಅವರು ಕೊರೊನಾ ಲಸಿಕೆಯ ಬಗ್ಗೆ ಪ್ರಶ್ನಿಸುತ್ತಿದ್ದರು. ಆದರೆ, ಎಲ್ಲರೂ ನೋಡುವಂತೆ ಕೊರೊನಾ ಲಸಿಕೆ ಆಭಿಯಾನ ಅತ್ಯುತ್ತಮವಾಗಿ ಸಾಗುತ್ತಿದೆ" ಎಂದರು.
ಈ ಭೂಮಿ ಪೂಜೆ ಸಮಾರಂಭದ ಮೂಲಕ ಸೆಂಟ್ರಲ್ ವಿಸ್ಟಾ ಅವೆನ್ಯೂನ ಅಭಿವೃದ್ದಿ ಹಾಗೂ ಪುನರಾಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಪ್ರದೇಶವು ಇಂಡಿಯಾ ಗೇಟ್ನ ಉತ್ತರ ಹಾಗೂ ದಕ್ಷಿಣ ಬ್ಲಾಕ್ವರೆಗೂ ಇದ್ದು, ರಾಜ್ಪಥ್, ಅದರ ಪಕ್ಕದ ಲಾನ್, ಕಾಲುವೆ, ಮರಗಳು ಸಾಲುಗಳು, ವಿಜಯ್ ಚೌಕ್ ಹಾಗೂ ಇಂಡಿಯಾ ಗೇಟ್ ಪ್ಲಾಜಾವನ್ನು ಒಳಗೊಂಡ 3 ಕಿ.ಮೀ ಪ್ರದೇಶವಾಗಿದೆ. ಇದು ಸುಮಾರು 608 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣವಾಗುತ್ತಿದೆ
"ಸೆಂಟ್ರಲ್ ವಿಸ್ಟಾ ಅವೆನ್ಯೂ ದೆಹಲಿಯಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ" ಎಂದು ಪುರಿ ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು.