ಬೆಂಗಳೂರು, ಫೆ.04 (DaijiworldNews/PY): ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ವಿಚಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅರ್ಜಿಯಲ್ಲಿ, "ಮಂಗಳೂರು, ಲಕ್ನೋ, ಅಹಮದಾಬಾದ್ ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ಗೆ ನೀಡಲು 2019ರಲ್ಲಿ ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನವನ್ನು ಹಿಂಪಡೆಯಬೇಕು" ಎಂದು ಉಲ್ಲೇಖಿಸಲಾಗಿದೆ.
ಈ ಅರ್ಜಿಯನ್ನು ಮಂಗಳೂರು ಬಜ್ಪೆಯ ವಿಮಾನ ನಿಲ್ದಾಣ ಪ್ರಾಧಿಕಾರ ಉದ್ಯೋಗಿಗಳ ಒಕ್ಕೂಟ ಸಲ್ಲಿಸಿದೆ.
ಕೇಂದ್ರ ಸರ್ಕಾರಕ್ಕೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾ ಸಚಿನ್ ಶಂಕರ್ ಮಗದಮ್ ನೇತೃತ್ವದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.
ಕೇಂದ್ರ ಸಚಿವ ಸಂಪುಟವು, ಮಂಗಳೂರು, ಅಹಮದಾಬಾದ್, ಗುಹಾವಟಿ, ಲಕ್ನೋ, ಜೈಪುರ ಹಾಗೂ ತಿರುವನಂತಪುರ ವಿಮಾನ ನಿಲ್ದಾಣಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಮುಂದುವರಿಸಲು 2018ರ ನವೆಂಬರ್ 8ರಂದು ಒಪ್ಪಿಗೆ ಸೂಚಿಸಿತ್ತು.
ಆದರೆ, ಕೇಂದ್ರ ಸಂಪುಟದ ಈ ತೀರ್ಮಾನ ಕಾನೂನುಬಾಹಿರ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ವ್ಯಾಪ್ತಿಗೆ ಮೀರಿದ ತೀರ್ಮಾನ ಎಂದು ಘೋಷಣೆ ಮಾಡುವಂತೆ ಅರ್ಜಿಯಲ್ಲಿ ತಿಳಿಸಲಾಗಿದೆ.