ನವದೆಹಲಿ, ಫೆ.04 (DaijiworldNews/MB) : ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿಚಾರವಾಗಿ ಹಾಗೂ ಕ್ರಿಕೆಟಿಗರ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ವಿವಾದಾತ್ಮಕ ಟ್ವೀಟ್ಗಳನ್ನು ಟ್ವೀಟರ್ ಅಳಿಸಿಹಾಕಿದೆ.
ಟ್ವಿಟರ್ ನಿಯಮಗಳನ್ನು ಕಂಗನಾ ಅವರು ಉಲ್ಲಂಘಿಸಿದ್ದು, ಈ ಕಾರಣ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಟ್ವೀಟ್ಗಳನ್ನು ಅಳಿಸಿಹಾಕಲಾಗಿದೆ ಎಂದು ಟ್ವಿಟರ್ ವಕ್ತಾರ ಮಾಹಿತಿ ನೀಡಿದ್ದಾರೆ.
ಕಂಗನಾ ಅವರು ಗುರುವಾರ ಮಾಡಿದ್ದ ಎರಡು ಟ್ವೀಟ್ಗಳನ್ನು ಅಳಿಸಿಹಾಕಲಾಗಿದೆ. ಈ ಟ್ವೀಟ್ಗಳಲ್ಲಿ ರೈತರನ್ನು ಭಯೋತ್ಪಾದಕರು ಮತ್ತು ಕ್ರಿಕೆಟಿಗರನ್ನು ನಾಯಿಗಳಿಗೆ ಹೋಲಿಸಿ ಕಂಗನಾ ಟ್ವೀಟ್ ಮಾಡಿದ್ದರು ವರದಿಯಾಗಿದೆ.
ಇನ್ನು ಕಂಗನಾ ನಿರಂತರವಾಗಿ ವಿವಾದಾತ್ಮಕ ಟ್ವೀಟ್ಗಳ ಮೂಲಕವೇ ಸುದ್ದಿಯಾಗುತ್ತಿದ್ದು ಈಗಾಗಲೆ ಕಂಗನಾರ ಹಲವು ಟ್ವೀಟ್ಗಳ ವಿರುದ್ದ ದೂರು ದಾಖಲಾಗಿದೆ. ಇನ್ನೂ ಕೆಲವರು ಕಂಗನಾ ಜನಪ್ರಿಯತೆ ಪಡೆಯುವ ಉದ್ದೇಶದಿಂದ ಮನಬಂದತ್ತೆ ಟ್ವೀಟ್ಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕೂಡಾ ಮಾಡಿದ್ದಾರೆ.
ಈ ಹಿಂದೆ ಅಮೆಜಾನ್ ಪ್ರೈಮ್ ವಿಡಿಯೊ ವೆಬ್ ಸರಣಿ 'ತಾಂಡವ್' ಬಗ್ಗೆ ಪ್ರತಿಕ್ರಿಯಿಸಿದ್ದ ಕಂಗನಾ ಹಿಂಸಾಚಾರಕ್ಕೆ ಪ್ರತಿಕ್ರಿಯೆ ನೀಡುವ ಟ್ವೀಟ್ ಮಾಡಿದ್ದು ಅದು ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಟ್ವೀಟನ್ನು ಅಳಿಸಿಹಾಕಿದ್ದರು.