ಬೆಂಗಳೂರು, ಫೆ.04 (DaijiworldNews/PY): "ಖಾಸಗಿ ದೇವಸ್ಥಾನದವರು, ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗಿರುವ ಖಾಸಗಿ ಸುತ್ತೋಲೆಯಿಂದ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಶಾಸಗಿ ದೇವಸ್ಥಾನವನ್ನು ವಶಪಡಿಸಿಕೊಳ್ಳವ ಪ್ರಶ್ನೆಯೇ ಇಲ್ಲ" ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಖಾಸಗಿ ದೇವಸ್ಥಾನದವರು, ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗಿರುವ ಖಾಸಗಿ ಸುತ್ತೋಲೆಯಿಂದ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಇದೊಂದು ನಿರಂತರವಾದ ಪ್ರಕ್ರಿಯೆ" ಎಂದರು.
"ದೇವಸ್ಥಾನಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ 2015ರಲ್ಲಿ ಧಾರ್ಮಿಕ ದತ್ತಿ ಕಾಯ್ದೆಯನ್ನು ತಿದ್ದುಪಡಿ ತರಲಾಗಿದೆ. ಸರ್ಕಾರವು, ಖಾಸಗಿ ದೇವಸ್ಥಾನಗಳ ಮೇಲೆ ಹಕ್ಕು ಚಲಾಯಿಸುವುದಾಗಲಿ, ನಿಗಾ ಇಡುವುದಾಗಲಿ ಹಾಗೂ ಸ್ವಾಯುತ್ತ ತೆಗೆದುಕೊಳ್ಳುವುದಾಗಲಿ ಅಲ್ಲ. ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ನೀಡಿದ್ದೇವೆ ಅಷ್ಟೇ" ಎಂದು ಹೇಳಿದರು.
"ಖಾಸಗಿ ದೇವಾಲಯ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಆತಂಕಗೊಳ್ಳುವ ಅವಶ್ಯಕತೆ ಇಲ್ಲ" ಎಂದರು.
"ಈ ಬಗ್ಗೆ 2011ರಲ್ಲಿ ಕಾಯ್ದೆ ತಂದಿರುವುದು 2015ರಲ್ಲಿ ಜಾರಿ ಮಾಡಿದ್ದಾರೆ. 2016, 17,18,19,20ರಲ್ಲಿ ನೆನಪಿನ ಸುತ್ತೋಲೆಯನ್ನು ಮಾತ್ರವೇ ನೀಡಿದ್ದೇವೆ. ಮೊನ್ನೆ ಕೂಡಾ ಆ ರೀತಿಯ ಸುತ್ತೋಲೆ ನೀಡಿದ್ದೇವೆ. ನನ್ನ ಗಮನಕ್ಕೆ ಬಾರದೇ ಇದು ಸಾಮಾನ್ಯ ಪ್ರಕ್ರಿಯೆಯ ರೀತಿಯ ಸುತ್ತೋಲೆಯನ್ನು ಕಳುಹಿಸಲಾಗಿದೆ. ಇದರಲ್ಲಿ ಖಾಸಗಿ ದೇವಾಲಯಗಳ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾರಾದರೂ ಸುತ್ತೋಲೆಯನ್ನು ಪುನಃ ತೆಗೆದುಕೊಳ್ಳಬೇಕು ಎಂದು ಹೇಳಿದರೆ ನಾನು ಪರಿಶೀಲಿಸುತ್ತೇನೆ. ಖಾಸಗಿ ದೇವಾಲಯಗಳು ಖಾಸಗಿಯಾಗಿಯೇ ಮುಂದುವರೆಯಲಿವೆ" ಎಂದು ತಿಳಿಸಿದರು.