ನವದೆಹಲಿ, ಫೆ.04 (DaijiworldNews/MB) : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಣರಾಜ್ಯೋತ್ಸವದ ದಿನ ನಡೆದ ಟ್ಯ್ರಾಕ್ಟರ್ ರ್ಯಾಲಿ ವೇಳೆ ಸಾವನ್ನಪ್ಪಿದ ರೈತ ನವನೀತ್ ಸಿಂಗ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.
ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ಮೃತ ರೈತನ ಕುಟುಂಬವು ವಾಸಿಸುತ್ತಿದ್ದು ಪ್ರಿಯಾಂಕಾ ಗಾಂಧಿ ಅಲ್ಲಿಗೆ ತೆರಳಿ ಭೇಟಿಯಾಗಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ರಾಹುಲ್ ಗಾಂಧಿಯವರು ಪ್ರಿಯಾಂಕಾ ಅವರೊಡನೆ ರೈತ ಕುಟುಂಬದ ಭೇಟಿಗೆ ತೆರಳಿರಲಿಲ್ಲ.
ಈ ಬಗ್ಗೆ ಮಾಧ್ಯಮಕ್ಕೆ ಈ ಹಿಂದೆ ಮಾಹಿತಿ ನೀಡಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು, ''ಕೆನಡಾದಿಂದ ಬಂದು ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ನವನೀತ್ ಅವರಿಗೆ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ನಮಗೆ ತಿಳಿದಿದೆ. ಪ್ರಿಯಾಂಕಾ ಗಾಂಧಿ ನವನೀತ್ ಕುಟುಂಬವನ್ನು ಭೇಟಿಯಾಗಲಿದ್ದಾರೆ'' ಎಂದು ತಿಳಿಸಿದ್ದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಹಲವು ಸುತ್ತಿನ ಮಾತುಕತೆಯು ವಿಫಲವಾಗಿದೆ. ಏತನ್ಮಧ್ಯೆ ಜನವರಿ 16 ರಂದು ರೈತರು ನಡೆಸಿದ ಟ್ಯ್ರಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರ ನಡೆದಿದೆ.