ಬೆಂಗಳೂರು, ಫೆ.04 (DaijiworldNews/PY): "ಕಾವೇರಿ ನೀರಿಗೆ ಕಲುಷಿತ ಮಿಶ್ರಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ" ಎಂದು ಪರಿಸರ, ಜೀವಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಪ್ರಶ್ನೋತ್ತರ ಅವಧಿಯ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ವೇಳೆ ಕಾವೇರಿ ನೀರಿಗೆ ಕಲುಷಿತ ಸೇರದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ" ಎಂದರು.
"ಕರ್ನಾಟಕ ನಗರ ನೀರು, ಸರಬರಾಜು ಮತ್ತು ಒಳಚರಂಡಿ ಮೂಲಕ ಕಾವೇರಿ ನದಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಬನ್ನೂರು, ಟಿ.ನರಸೀಪುರ, ಹನೂರು ಹಾಗೂ ಶ್ರೀರಂಗಪಟ್ಟಣ ನಗರಗಳಲ್ಲಿ ನೀರು ಸಂಸ್ಕರಣೆಯಾಗದೆ ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ" ಎಂದು ಹೇಳಿದರು.
"ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ನಡೆಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಲೋಪವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು" ಎಂದರು.
"ಕಾವೇರಿ ನದಿ ನೀರನ್ನು ಮೈಸೂರು ಸೇರಿದಂತೆ ಮಡಿಕೇರಿ, ಮಂಡ್ಯ ಹಾಗೂ ಚಾಮರಾಜ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ನಮ್ಮ ಸರ್ಕಾರವು ಕಲುಷಿತ ನೀರನ್ನು ತಡೆಯಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತದೆ" ಎಂದು ತಿಳಿಸಿದರು.