ನವದೆಹಲಿ, ಫೆ.04 (DaijiworldNews/HR): "ರೈತರ ಹಿತದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮಂಡಿಗಳನ್ನು ಲಾಭದಾಯಕವಾಗಿಸಲು, ಇನ್ನೂ 1,000 ಮಂಡಿಗಳನ್ನು ಇ-ನಾಮ್ (ರಾಷ್ಟ್ರೀಯ ಕೃಷಿ ಮಾರುಕಟ್ಟೆ) ವ್ಯವಸ್ಥೆಗೆ ಜೋಡಿಸಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಚೌರಿ ಚೌರಾ ಘಟನೆಯ ಶತಮಾನೋತ್ಸವದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ದೇಶದ ಪ್ರಗತಿಯ ಹಿಂದೆ ರೈತರ ಪಾತ್ರವಿದ್ದು, ಚೌರಿ ಚೌರಾ ಹೋರಾಟದಲ್ಲೂ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ರೈತರನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಫಲವಾಗಿ ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲೂ ಕೃಷಿ ಕ್ಷೇತ್ರವು ಬೆಳವಣಿಗೆ ಸಾಧಿಸಿದೆ" ಎಂದರು.
ಇನ್ನು "ಚೌರಿ ಚೌರಾ ಹುತಾತ್ಮರ ಬಗ್ಗೆ ಹೆಚ್ಚು ಚರ್ಚಿಸಲ್ಪಡದಿರುವುದು ದುರದೃಷ್ಟಕರವಾಗಿದ್ದು, ಇತಿಹಾಸ ಪುಟಗಳಲ್ಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ. ಆದರೆ ಅವರ ರಕ್ತವು ಈ ಮಣ್ಣಿನಲ್ಲಿದ್ದು, ನಮಗೆ ಸದಾ ಸ್ಫೂರ್ತಿ ತುಂಬಲಿದೆ" ಎಂದು ತಿಳಿಸಿದ್ದಾರೆ.