ನವದೆಹಲಿ, ಫೆ.04 (DaijiworldNews/PY): "ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ರೈತರು ಜವಾಬ್ದಾರರಲ್ಲ" ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರೈತರ ಪ್ರತಿಭಟನೆಯವ ವಿಚಾರವಾಗಿ 15 ಗಂಟೆಗಳ ಸತತ ಚರ್ಚೆ ನಡೆಸಲಾಗುತ್ತಿದ್ದು, ಈ ವೇಳೆ ಮಾತನಾಡಿದ ಅವರು, "ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆಗೆ ರೈತರು ಜವಾಬ್ದಾರರಲ್ಲ. ಅವರಿಗೆ ಶಿಕ್ಷೆ ವಿಧಿಸಬೇಡಿ" ಎಂದಿದ್ದಾರೆ.
"ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಗೋಡೆ ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯಾದ ಪ್ರಯೋಜನವಿಲ್ಲ. ಇದರ ಬದಲಾಗಿ ಸಮಸ್ಯೆಗೆ ಸರ್ಕಾರವು ಶಾಂತಿಯುತವಾದ ಪರಿಹಾರ ಕಂಡುಕೊಳ್ಳಬೇಕು" ಎಂದು ಹೇಳಿದ್ದಾರೆ.
"ರಾಷ್ಟ್ರ ರಾಜಧಾನಿಯ ಗಡಿಗಳು ಈಗ ಅಂತರಾಷ್ಟ್ರೀಯ ಗಡಿಗಳಂತೆ ಭಾಸವಾಗುತ್ತಿವೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
"ಬ್ಯಾರಿಕೇಡ್ ಸೇರಿದಂತೆ ಲೋಹದ ತಡೆಗೋಡೆಗಳು, ತಂತಿ ಬೇಲಿಗಳಿಂದ ತಾತ್ಕಾಲಿಕವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ" ಎಂದು ರೈತರು ಕಿಡಿಕಾರಿದ್ದಾರೆ.