ಲಕ್ನೋ, ಫೆ.04 (DaijiworldNews/MB) : ರೈತರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ ಹೊತ್ತಿರುವ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್, ಅವರು ರೈತರ ಹೋರಾಟ ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ವಿರುದ್ಧ ಕಿಡಿಕಾರಿದ್ದಾರೆ.
''ರಾಕೇಶ್ ಟಿಕಾಯತ್ ಅವರು ಎರಡು ಸಾವಿರ ರೂಪಾಯಿಗಾಗಿ ಎಲ್ಲಿಗೆ ಬೇಕಾದರೂ ಹೋಗುತ್ತಾರೆಂದು ಜನರು ಆಡಿಕೊಳ್ಳುತ್ತಾರೆ'' ಎಂದು ಆರೋಪ ಮಾಡಿದ ಅವರು, ''ಇದು ದುರಾದೃಷ್ಟಕರ. ಅವರು ಹಾಗೆ ಮಾಡಬಾರದು. ಅವರು ಪ್ರತಿಭಟನೆಯನ್ನು ಎತ್ತ ಸಾಗಿಸುತ್ತಿದ್ದಾರೆ'' ಎಂದು ಪ್ರಶ್ನಿಸಿದರು.
''ನಾನು ಕೂಡ ಒಬ್ಬ ರೈತ'' ಎಂದು ಕೂಡಾ ಬಿಜೆಪಿ ಶಾಸಕ ಹೇಳಿಕೊಂಡಿದ್ದು, ''ರಾಕೇಶ್ ಟಿಕಾಯತ್ ಅವರೇನೂ ನನಗಿಂತ ದೊಡ್ಡ ರೈತರಲ್ಲ. ನನ್ನ ಬಳಿ ಇರುವ ಅರ್ಧದಷ್ಟು ಜಮೀನು ಕೂಡ ಅವರ ಬಳಿ ಇಲ್ಲ'' ಎಂದು ಟೀಕಿಸಿದರು.
ಇನ್ನು, ತನ್ನ ವಿರುದ್ದವಿರುವ ರೈತರ ಪ್ರತಿಭಟನೆಗೆ ಅಡ್ಡಿಪಡಿಸಿದ ಆರೋಪವನ್ನು ಅಲ್ಲಗಳೆದ ಗುರ್ಜರ್, ''ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ನಮ್ಮನ್ನು ಉಗ್ರರು ಕೊಲ್ಲಲು ಬಂದರು ಎಂದು ನಾಳೆ ನೀವು ಹೇಳಬಹುದು'' ಎಂದರು.
''ಇದು ರೈತರ ಪ್ರತಿಭಟನೆ ಎಂದು ಹೇಳುವವರಾರು'' ಎಂದು ಪ್ರಶ್ನಿಸಿದ ಅವರು, ''ಅಲ್ಲಿಗೆ ಹೋಗಿ ನೋಡಿ, ರಾಜಕೀಯ ಪಕ್ಷವೊಂದರ ನಾಲ್ಕು ಮಂದಿ ಅಲ್ಲಿ ಕುಳಿತಿದ್ದಾರೆ. ಅದು ರೈತರ ಪ್ರತಿಭಟನೆಯೇ?, ಅವರು ರೈತರು, ಕಾರ್ಮಿಕರು ಆಗಿರಬಹುದು'' ಎಂದು ಹೇಳಿದರು.