ಲಖನೌ, ಫೆ.04 (DaijiworldNews/HR): ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ನೀಡಿರುವ ನಿವೇಶನದ ಮಾಲೀಕತ್ವ ತಮ್ಮದೆಂದು ಹೇಳಿಕೊಂಡಿರುವ ದೆಹಲಿ ಮೂಲದ ಇಬ್ಬರು ಸಹೋದರಿಯರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವವರು ಅರ್ಜಿ ಸಲ್ಲಿಸಿದ್ದು, ವಿಚಾರಣೆಯು ಫೆ. 8ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
"ನಮ್ಮ ತಂದೆಯಾದ ಜ್ಞಾನಚಂದ್ರ ಪಂಜಾಬಿ ಅವರು ದೇಶ ವಿಭಜನೆ ಸಂದರ್ಭದಲ್ಲಿ, 1947ರಲ್ಲಿ ಭಾರತಕ್ಕೆ ಬಂದು, ಅಯೋಧ್ಯೆಯಲ್ಲಿ ನೆಲೆಸಿದ್ದರು, ಧನ್ನಿಪುರ ಗ್ರಾಮದಲ್ಲಿ ತಂದೆಗೆ ನಜುಲ್ ಇಲಾಖೆಯು 28 ಎಕರೆ ಜಮೀನನ್ನು ನೀಡಿತ್ತು. 5 ವರ್ಷಗಳ ಅವಧಿಗೆ ನೀಡಿದ್ದ ಜಮೀನಿನ ಮಾಲೀಕತ್ವ ನಂತರವೂ ಮುಂದುವರಿಯಿತು. ಕಂದಾಯ ಇಲಾಖೆಯಲ್ಲಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತಂದೆ ಹೆಸರನ್ನು ಸೇರಿಸಲಾಗಿತ್ತು" ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇನ್ನು ನಮ್ಮ ತಂದೆಯ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಲಾಗಿದ್ದು, ಇದನ್ನು ಪ್ರಶ್ನಿಸಿ ತಂದೆಯವರು ಅಯೋಧ್ಯೆಯಲ್ಲಿನ ನಜುಲ್ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಬಳಿಕ ಅಧಿಕಾರಿಗಳು ಮತ್ತೆ ತಂದೆಯವರ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಿದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸದೇ, 28 ಎಕರೆ ಪೈಕಿ 5 ಎಕರೆಯನ್ನು ವಕ್ಫ್ ಬೋರ್ಡ್ಗೆ ಹಂಚಿಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.