ಬೆಂಗಳೂರು, ಫೆ.04 (DaijiworldNews/PY): "ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಯರ ಮಧ್ಯಪ್ರವೇಶ ಒಪ್ಪಲಾಗದು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದ್ಯಾಕೆ ಎಂದು ಆಳುವ ಸರ್ಕಾರವನ್ನು ಪ್ರಶ್ನೆ ಮಾಡಬಹುದಲ್ಲವೆ?" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಯರ ಮಧ್ಯಪ್ರವೇಶ ಒಪ್ಪಲಾಗದು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದ್ಯಾಕೆ ಎಂದು ಆಳುವ ಸರ್ಕಾರವನ್ನು ಪ್ರಶ್ನೆ ಮಾಡಬಹುದಲ್ಲವೆ?. ಕೇಂದ್ರ ಸರ್ಕಾರದ ಪರ ಈಗ ಬ್ಯಾಟಿಂಗ್ ಮಾಡುವವರು ಕರಾಳ ಕೃಷಿ ಕಾಯ್ದೆ ರದ್ದು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತಲ್ಲವೆ?" ಎಂದು ಪ್ರಶ್ನಿಸಿದ್ದಾರೆ.
"ರೈತರ ಪ್ರತಿಭಟನೆ ವಿಚಾರದಲ್ಲಿ ಸೆಲೆಬ್ರಿಟಿಗಳ ಅಷಾಢಭೂತಿತನ ಎದ್ದು ಕಾಣುತ್ತಿದೆ. 2 ತಿಂಗಳಿನಿಂದಲೂ ರೈತರು ಜೀವ ಪಣಕಿಟ್ಟು ಹೋರಾಟ ನಡೆಸುತ್ತಿದ್ದಾರೆ. 140ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ಸೆಲಿಬ್ರಿಟಿಗಳು ರೈತರ ಜೊತೆ ನಿಂತು, ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದರೆ ಅದಕ್ಕೊಂದು ಅರ್ಥವಿರುತಿತ್ತು" ಎಂದಿದ್ದಾರೆ.
"ರೈತ ದೇಶದ ಬೆನ್ನೆಲುಬು ಎಂಬ ತೋರುಗಾಣಿಕೆಯ ಹೇಳಿಕೆಯಿಂದ ಏನು ಪ್ರಯೋಜನ?. ದೇಶದ ಬೆನ್ನೆಲುಬಾದ ರೈತರನ್ನೇ ಈ ಸರ್ಕಾರ ದೇಶದ್ರೋಹಿಗಳಂತೆ ಬಿಂಬಿಸುತ್ತಿದೆ. ರೈತರು ದೆಹಲಿ ಪ್ರವೇಶಿದಂತೆ ರಸ್ತೆಯ ತುಂಬಾ ಮೊಳೆ ಹೊಡೆದು, ಗೋಡೆ ಕಟ್ಟಿ, ಅನಾಗರಿಕವಾಗಿ ನಡೆಸಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
"ಇಂದು ಉಳ್ಳವರ ದೃಷ್ಟಿಯಲ್ಲಿ ಬಂಡವಾಳಶಾಹಿಗಳ ದೃಷ್ಟಿಯಲ್ಲಿ, ಬಂಡವಾಳಶಾಹಿಗಳಿಗೆ ತಮ್ಮನ್ನು ಮಾರಿಕೊಂಡಿರುವ ಸರ್ಕಾರದ ದೃಷ್ಟಿಯಲ್ಲಿ ರೈತ ಖಳನಾಯಕನಿರಬಹುದು. ಆದರೆ ವಾಸ್ತವವಾಗಿ ಭಾರತದ ಆತ್ಮ ಮತ್ತು ಅಸ್ಮಿತೆಯ ಸಂಕೇತವೇ ರೈತ ಎಂಬುದು ಕಟು ಸತ್ಯ. ಇಂತಹ ರೈತರ ಪರ ನಿಲ್ಲದೆ ಹೋದರೆ ಅದು ಆತ್ಮವಂಚನೆ. ಇದನ್ನು ಸ್ಟಾರ್ಗಳು ಅರ್ಥ ಮಾಡಿಕೊಳ್ಳಲಿ" ಎಂದಿದ್ದಾರೆ.
ಕೇಂದ್ರ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಖ್ಯಾತ ಗಾಯಕಿ ರಿಹಾನ್ನಾ ಸೇರಿದಂತೆ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಹಾಗೂ ಅನೇಕ ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು.