ನವದೆಹಲಿ, ಫೆ.04 (DaijiworldNews/PY): "ಕ್ರಿಕೆಟಿಗರ ಟ್ವೀಟ್ಗಳಿಂದ ದೇಶದ ಜಾಗತಿಕ ಚಿತ್ರಣಕ್ಕಾದ ಹಾನಿಯನ್ನು ಪರಿಹರಿಸಲಾಗದು" ಎಂದು ಕಾಂಗ್ರೆಸ್ನ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕೇಂದ್ರ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಖ್ಯಾತ ಗಾಯಕಿ ರಿಹಾನ್ನಾ ಸೇರಿದಂತೆ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಹಾಗೂ ಅನೇಕ ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಆದರೆ, ದೇಶದ ಅಪಪ್ರಚಾರದ ವಿರುದ್ದ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಟ್ವೀಟ್ ಮಾಡಿದ್ದು, ಇದು ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿತ್ತು.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ತರೂರ್, "ಭಾರತ ಸರ್ಕಾರವು ವಿದೇಶಿಯರಿಗೆ ದೇಶದ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುವಂತೆ ಮಾಡಿದ್ದು ನಿಜಕ್ಕೂ ಮುಜುಗರವನ್ನುಂಟು ಮಾಡಿದೆ. ಕ್ರಿಕೆಟಿಗರ ಟ್ವೀಟ್ಗಳಿಂದ ದೇಶದ ಜಾಗತಿಕ ಚಿತ್ರಣಕ್ಕಾದ ಹಾನಿಯನ್ನು ಪರಿಹರಿಸಲಾಗದು"ಎಂದಿದ್ದಾರೆ.
"ಕೃಷಿ ಕಾನೂನುಗಳನ್ನು ಹಿಂಪಡೆದುಕೊಂಡು ರೈತರ ಜೊತೆ ಪರಿಹಾರಗಳನ್ನು ಚರ್ಚಿಸಿ. ಭಾರತವನ್ನು ಮತ್ತೆ ಒಗ್ಗಟ್ಟಾಗಿ ಪಡೆಯಲಿದ್ದೀರಿ" ಎಂದು ತರೂರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೇಶದ ಆಂತರಿಕ ವಿಚಾರದ ಬಗ್ಗೆ ವಿದೇಶಿಯರು ಪ್ರತಿಕ್ರಿಯೆ ನೀಡುವುದರ ವಿರುದ್ದವಾಗಿ ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿತ್ತು. ಬಳಿಕ ದೇಶದ ಅಪಪ್ರಚಾರದ ವಿರುದ್ದ ಮಾಜಿ ಹಾಗೂ ಸಮಕಾಲೀನ ಕ್ರಿಕೆಟ್ ತಾರೆಯರು ಟ್ವೀಟ್ ಮಾಡಿದ್ದರು. ಈ ಪೈಕಿ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಅಜಿಂಕ್ಯಾ ರಹಾನೆ ಹಾಗೂ ವಿರಾಟ್ ಕೊಹ್ಲಿ ಪ್ರಮುಖರು.