ಮುಂಬೈ, ಫೆ.04 (DaijiworldNews/PY): ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ರಮೇಶ್ ಪವಾರ್ ಅವರು ನೀರು ಎಂದು ಭಾವಿಸಿ ಸ್ಯಾನಿಟೈಸರ್ ಕುಡಿದ ಘಟನೆ ಬುಧವಾರದಂದು ನಡೆದಿದೆ.
ಪಾಲಿಕೆಯ ಶಿಕ್ಷಣ ಬಜೆಟ್ ಮಂಡನೆಯ ಸಂದರ್ಭ ಈ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಮಾತನಾಡಿದ ಅವರು, "ಟೇಬಲ್ನ ಎದುರುಗಡೆ ಸ್ಯಾನಿಟೈಸರ್ ಹಾಗೂ ನೀರಿನ ಬಾಟಲಿಗಳನ್ನು ಇಡಲಾಗಿದ್ದು, ಸ್ಯಾನಿಟೈಸರ್ ಹಾಗೂ ನೀರಿನ ಬಾಟಲಿಗಳು ಒಂದೇ ರೀತಿಯಾಗಿ ಕಾಣುತ್ತಿದ್ದವು. ಈ ಕಾರಣದಿಂದ ಹೀಗಾಯಿತು" ಎಂದಿದ್ದಾರೆ.
"ನಾನು ಭಾಷಣ ಪ್ರಾರಂಭ ಮಾಡುವ ಮುನ್ನ ನೀರು ಕುಡಿಯಬೇಕು ಎಂದು ಭಾವಿಸಿದ್ದೆ. ಸ್ಯಾನಿಟೈಸರ್ ಹಾಗೂ ನೀರಿನ ಬಾಟಲಿಗಳು ಒಂದೇ ರೀತಿಯಾಗಿ ಕಾಣುತ್ತಿದ್ದವು. ಈ ಕಾರಣದಿಂದ ಆಕಸ್ಮಿಕವಾಗಿ ಸ್ಯಾನಿಟೈಸರ್ ಬಾಟಲಿ ತೆಗೆದುಕೊಂಡಿದ್ದು, ಒಂದು ಗುಟುಕು ಕುಡಿಯುತ್ತಿದ್ದಂತೆ, ನಾನು ಸ್ಯಾನಿಟೈಸರ್ ಬಾಟಲಿ ತೆಗೆದುಕೊಂಡಿದ್ದು ಎನ್ನುವುದ ತಿಳಿಯಿತು. ಆ ಗುಟುಕನ್ನು ನುಂಗದೇ ಹೊರಚೆಲ್ಲಿದೆ" ಎಂದು ಹೇಳಿದ್ದಾರೆ.
ಕೂಡಲೇ ಅವರು ಸಭೆಯಿಂದ ಹೊರನಡೆದಿದ್ದು, ಸ್ವಲ್ಪ ಸಮಯದ ಬಳಿಕ ವಾಪಾಸ್ಸಾಗಿದ್ದು ಬಜೆಟ್ ಮಂಡಿಸಿದ್ದಾರೆ.
ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.