ಬೆಂಗಳೂರು, ಫೆ.04 (DaijiworldNews/MB) : ''ರಾಜ್ಯದಲ್ಲಿ ಸಾರಿಗೆ ಇಲಾಖೆಯು ಕೊರೊನಾ ಕಾರಣದಿಮದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸದ್ಯ ಬರುವ ಆದಾಯದಲ್ಲಿ ವಾಹನದ ಇಂಧನಕ್ಕಾಗಿಯೂ ಸಾಲುತ್ತಿಲ್ಲ'' ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.
ಶಾಸಕ ಹೆಚ್.ಡಿ. ರೇವಣ್ಣ ಪರವಾಗಿ ಎ.ಟಿ. ರಾಮಸ್ವಾಮಿ ವಿಧಾನಸಭೆಯಲ್ಲಿ ನಡೆದ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಸಾರಿಗೆ ಸಂಸ್ಥೆಯ 4 ನಿಗಮಗಳು ನಷ್ಟದಲ್ಲಿವೆ. ಸಾರಿಗೆ ಇಲಾಖೆಯು ಭಾರೀ ಸಂಕಷ್ಟದಲ್ಲಿದೆ. ಬರುವ ಆದಾಯ ಇಂಧನಕ್ಕೂ ಸಾಲುವುದಿಲ್ಲ. ನೌಕರರಿಗೆ ಸಂಬಳ ನೀಡಲು ಆದಾಯವಿಲ್ಲ. ಆದ್ದರಿಂದ ವೇತನ ವಿಳಂಬವಾಗುತ್ತಿದೆ'' ಎಂದು ತಿಳಿಸಿದರು.
ಹಾಗೆಯೇ ಈ ಸಂದರ್ಭದಲ್ಲೇ, ''ಕೆ.ಎಸ್.ಆರ್.ಟಿ.ಸಿ. ಪ್ರಾದೇಶಿಕ ಕಾರ್ಯಾಗಾರವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕಾರ್ಯವನ್ನು ಹಾಗೂ ನೂತನ ಯಂತ್ರೋಪಕರಣಗಳನ್ನು ಅಳವಡಿಸಲು ರೂ. 42 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು ಯಂತ್ರೋಪಕರನಗಳ ನಿಗದಿತ ಮೊತ್ತ ಹೊರತುಪಡಿಸಿ ಕಾಮಗಾರಿ ಕಾರ್ಯಕ್ಕಾಗಿ 32 ಕೋಟಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ'' ಎಂದು ಹೇಳಿದರು.
''ಸರ್ಕಾರದಿಂದ ಪ್ರಸ್ತುತ 10 ಕೋಟಿ ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ. ಯೋಜನಾ ವೆಚ್ಚವನ್ನು 10 ಕೋಟಿ ರೂ. ಗಳಿಗೆ ಮಾತ್ರ ಸೀಮಿತಗೊಳಿಸಲು ಒಂದನೇ ಹಂತದದಲ್ಲಿಯೇ ಪೂರ್ಣಗೊಳಿಸಲು ಅಥವಾ ಉಳಿದ ಅನುದಾನವನ್ನು ನಿಗಮದ ಆಂತರಿಕ ಸಂಪನ್ಮೂಲದಿಂದ ವಿನಿಯೋಗಿಸಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಅಭಿಪ್ರಾಯ ನೀಡಿದೆ'' ಎಂದು ತಿಳಿಸಿದರು.