ನವದೆಹಲಿ, ಫೆ.03 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದಾರೆ. ರೈತರ ಪ್ರತಿಭಟನೆ ಕುರಿತಾದ ಒಂದು ಲೇಖನವನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಅವರು, ''ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?'' ಎಂದು ಪ್ರಶ್ನಿಸಿದ್ದಾರೆ. ಪಾಪ್ ಗಾಯಕಿ ರಿಹಾನ್ನಾರ ಈ ಟ್ವೀಟ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಸಿಡಿಮಿಡಿಗೊಂಡಿದ್ದಾರೆ. ''ಅವರು ರೈತರಲ್ಲ ಉಗ್ರರು'' ಎಂದು ಹೇಳಿರುವ ಕಂಗನಾ, ''ನೀನು ಸುಮ್ಮನಿರು ಮೂರ್ಖಿ'' ಎಂದು ರಿಹಾನ್ನಾ ವಿರುದ್ದ ಗುಡುಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ''ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ ಏಕೆಂದರೆ ಅವರು ರೈತರಲ್ಲ, ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು. ಇದರಿಂದಾಗಿ ಚೀನಾ ನಮ್ಮ ರಾಷ್ಟ್ರವನ್ನು ಸ್ವಾಧೀನಪಡಿಸಿಕೊಳ್ಳಬಹುದು. ಮತ್ತೆ ಭಾರತವನ್ನು ಅಮೇರಿಕಾದಂತೆ ಚೀನೀ ಕಾಲನಿಯನ್ನಾಗಿ ಮಾರ್ಪಡಿಸಬಹುದು. ನೀನು ಸುಮ್ಮನಿರು ಮೂರ್ಖಿ, ನಿಮ್ಮಂತೆಯೇ ನಾವು ನಮ್ಮ ರಾಷ್ಟ್ರವನ್ನು ಮಾರಾಟ ಮಾಡುತ್ತಿಲ್ಲ'' ಎಂದು ಆಕ್ರೋಶಗೊಂಡಿದ್ದಾರೆ.