ನವದೆಹಲಿ, ಫೆ.03 (DaijiworldNews/PY): ಕಳೆದ ಮೂರು ವರ್ಷಗಳಲ್ಲಿ ಭಾರತದ ಗಡಿಯಲ್ಲಿ ಪಾಕಿಸ್ತಾನವು ಒಟ್ಟು 10,752 ಕದನ ವಿರಾಮ ನಿಯಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.
ಸಾಂಧರ್ಭಿಕ ಚಿತ್ರ
ಪಾಕ್ ಕದನ ವಿರಾಮ ನಿಯಮವನ್ನು ಉಲ್ಲಂಘಿಸಿ ನಡೆಸಿರುವ ದಾಳಿಯಲ್ಲಿ 72 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದು, 70 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
"2018, 2019 ಹಾಗೂ 2020ನೇ ವರ್ಷಗಳಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರದಲ್ಲಿ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಉಲ್ಲಂಘಿಸಿ ಸುಮಾರು 364 ಭದ್ರತಾ ಸಿಬ್ಬಂದಿಗಳು ಸೇರಿದಂತೆ 341 ನಾಗರಿಕರು ಗಾಯಗೊಂಡಿದ್ದಾರೆ" ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 1,452 ಭಯೋತ್ಪಾದಕ ದಾಳಿ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ದಾಳಿಯ ಪರಿಣಾಮ ಸುಮಾರು 233 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದು, 115 ನಾಗರಿಕರು ಸಾವನ್ನಪ್ಪಿರುವುದಾಗಿ ಪ್ರಶ್ನೆಗೆ ಉತ್ತರಿಸಿದ್ದಾರೆ.
"ಕಳೆದ ಮೂರು ವರ್ಷಗಳದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು 635 ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಒಟ್ಟು 484 ಭದ್ರತಾ ಸಿಬ್ಬಂದಿಗಳು ಹಾಗೂ 373 ನಾಗರಿಕರು ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಪಾಕ್ ಸೈನ್ಯವು ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದರ ವಿರುದ್ದ ಭಾರತ ಸೂಕ್ತವಾದ ಪ್ರತ್ಯುತ್ತರವನ್ನು ನೀಡುತ್ತಲೇ ಬಂದಿದೆ" ಎಂದು ತಿಳಿಸಿದ್ದಾರೆ.