ಬೆಂಗಳೂರು, ಫೆ.03 (DaijiworldNews/PY): "ಯುದ್ದ ವಿಮಾನ ಹಾಗೂ ಹೆಲಿಕಾಫ್ಟರ್ಗಳ ಉತ್ಪಾದನೆಯ ಶೇ.65ರಷ್ಟು ಹಾಗೂ ರಕ್ಷಣಾ ಪರಿಕರಗಳ ಶೇ.67ರಷ್ಟು ಉತ್ಪಾದನೆ ಬೆಂಗಳೂರಿನಲ್ಲೇ ಆಗುತ್ತಿದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ, "ದೇವನಹಳ್ಳಿಯಲ್ಲಿ ಸ್ಥಾಪನೆಯಾಗುತ್ತಿರುವ ವೈಮಾಂತರಿಕ್ಷ 10,500 ಉದ್ಯೋಗ ಸೃಷ್ಟಿಸಲು ಸಹಾಯಕವಾಗಿದೆ" ಎಂದು ತಿಳಿಸಿದರು.
ಏರೋ ಇಂಡಿಯಾ -2021ಕ್ಕೆ ಚಾಲನೆಯ ಸಂದರ್ಭ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ -2021ರ ಧ್ವಜ ಹೊತ್ತ ಎಲ್ಯುಹೆಚ್ ಹೆಲಿಕಾಫ್ಟರ್ಗಳ ಪ್ರದರ್ಶನ ನಡೆದವು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಭಾರತದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬಧೋರಿಯ, ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಯ ಮುಖ್ಯಸ್ಥ ಎಂ.ಎಂ.ನರವಣೆ, ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜ್ ಕುಮಾರ್, ನೌಕಾಪಡೆಯ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್, ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ವಾಯುಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರು ಭಾಗವಹಿಸಿದ್ದರು.
ಹೆಲಿಕಾಫ್ಟರ್ಗಳ ಪ್ರದರ್ಶನದ ಹಿನ್ನೆಲೆ ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಕು ಹಾಗೂ ಭಾರೀ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಏರ್ ಶೋ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ..