ಬೆಂಗಳೂರು, ಫೆ.03 (DaijiworldNews/MB) : ''ಹಿಂದಿನಿಂದಲೇ ಜಾತ್ಯತೀತ ನಿಲುವಿನ ಮೇಲೆ ನಂಬಿಕೆ ಹೊಂದಿರುವ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಸಭಾಪತಿ ಸ್ಥಾನ ಹೊಂದಾಣಿಕೆಗಾಗಿ ಬಿಜೆಪಿ ಜೊತೆ ಹೋಗದಿರುವುದೇ ಒಳಿತು'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
ಎಚ್.ಡಿ. ದೇವೇಗೌಡ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ''ಉಪಸಭಾಪತಿ ಚುನಾವಣೆ ಮೊನ್ನೆಯಷ್ಟೇ ನಡೆದಿದ್ದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್ನಲ್ಲಿ ಚರ್ಚೆ ನಡೆಯಲಿದೆ. ಇನ್ನು ಹಿಂದಿನಿಂದಲೇ ಜಾತ್ಯತೀತ ನಿಲುವಿನ ಮೇಲೆ ನಂಬಿಕೆ ಹೊಂದಿರುವ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಸಭಾಪತಿ ಸ್ಥಾನ ಹೊಂದಾಣಿಕೆಗಾಗಿ ಬಿಜೆಪಿ ಜೊತೆ ಹೋಗದಿರುವುದೇ ಒಳಿತು'' ಎಂದಿದ್ದಾರೆ.
ಇನ್ನು, ''ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕು'' ಎಂದು ಅಭಿಪ್ರಾಯಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ''ರೈತರು ಅನ್ನದಾತರು, ದೇಶದ ಬೆನ್ನೆಲುಬು ಎಂದು ಹೇಳುವ ಬಿಜೆಪಿಯವರು ಹೇಳಿಕೆಯಲ್ಲಿ ಒಂದು ರೀತಿ ಮನಸ್ಸಿನಲ್ಲಿ ಒಂದು ರೀತಿ ನಿಲುವು ಹೊಂದಿದ್ದಾರೆ. ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದು ಮಾತ್ರವಲ್ಲದೇ ಬಿಜೆಪಿಯವರೇ ವೇಷ ಮರೆಸಿಕೊಂಡು ಬಂದು ರಸ್ತೆಯಲ್ಲಿ ಮೊಳೆ ಹೊಡೆದು ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ಅವರ ಮುಖವಾಡ ಹೊರಬಿದ್ದಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಯವರು ಅನುಭವಿಸುತ್ತಾರೆ'' ಎಂದು ಎಚ್ಚರಿಕೆ ನೀಡಿದರು.