ನವದೆಹಲಿ, ಫೆ.03 (DaijiworldNews/PY): "ಅನೇಕ ಸರ್ವಾಧಿಕಾರಿಗಳ ಹೆಸರು ಎಂ ಅಕ್ಷರದಿಂದ ಏಕೆ ಆರಂಭವಾಗಿದೆ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅನೇಕ ಸರ್ವಾಧಿಕಾರಿಗಳ ಹೆಸರುಗಳು ಎಂ ಅಕ್ಷರದಿಂದ ಪ್ರಾರಂಭವಾಗಲು ಕಾರಣವೇನು?". ಮಾರ್ಕಸ್, ಮುಸ್ಸೋಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರಫ್ ಹಾಗೂ ಮೈಕಾಂಬೆರೊ ಎನ್ನುವವರ ಹೆಸರಗಳನ್ನು ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ಅವರು ಮಾಡಿರುವ ಈ ಟ್ವೀಟ್ನ ಹಿಂದಿರುವ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಆರೋಪ ಮಾಡುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಅವರಿಗೆ ಬೆಂಬಲ ನೀಡುವ ಟ್ವಿಟ್ಟರ್ ಖಾತೆಗಳನ್ನು ತಾತ್ಕಲಿಕವಾಗಿ ನಿಷೇಧ ಮಾಡಿದ ಕೇಂದ್ರದ ಧೋರಣೆಗೆ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು.
ದೆಹಲಿ ಗಡಿಗಳಲ್ಲಿ ಪ್ರತಿಭಟನಾನಿರತ ರೈತರನ್ನು ತಡೆಯುವ ನಿಟ್ಟಿನಲ್ಲಿ ಕಾಂಕ್ರೀಟ್, ಕಬ್ಬಿಣದ ಸರಳು ಹಾಗೂ ಮೊಳೆಗಳನ್ನು ಸ್ಥಾಪಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, "ಸೇತುವೆಗಳ ನಿರ್ಮಾಣ ಮಾಡಿ, ಗೋಡೆಗಳನ್ನಲ್ಲ" ಎಂದಿದ್ದರು.
ಇದಕ್ಕೂ ಮುನ್ನ ಕೇಂದ್ರ ಬಜೆಟ್ 2021ರ ಬಗ್ಗೆ ಕೂಡಾ ಟೀಕೆ ಮಾಡಿರುವ ಅವರು, "ಪ್ರಧಾನಿ ಮೋದಿ ಸರ್ಕಾರವು ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ದೇಶದ ಸಂಪತ್ತನ್ನು ಹಸ್ತಾಂತರಿಸುವ ಷಡ್ಯಂತ್ರ ನಡೆಸಿದೆ" ಎಂದು ಹೇಳಿದ್ದಾರೆ.