ನವದೆಹಲಿ, ಫೆ.03 (DaijiworldNews/PY): "ರಾಜ್ಯಸಭೆಯ ಕಲಾಪವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಬೇಡಿ" ಎಂದು ರಾಜ್ಯಸಭೆಯ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಸಂಸದರಿಗೆ ಎಚ್ಚರಿಸಿದ್ದಾರೆ.
"ರಾಜ್ಯಸಭೆಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದ್ದು, ಆದರೆ, ಕೆಲ ಸದಸ್ಯರು ರಾಜ್ಯಸಭೆಯ ಕಲಾಪವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಇದು ಸಂಸದೀಯ ನಿಯಮಕ್ಕೆ ವಿರುದ್ದವಾಗಿದೆ" ಎಂದಿದ್ದಾರೆ.
"ರಾಜ್ಯಸಭೆಯ ಕಲಾಪವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಂಚಿಕೊಳ್ಳಬಾರದು" ಎಂದು ಹೇಳಿದ್ದಾರೆ.
"ರಾಜ್ಯಸಭೆಯಲ್ಲಿ ಕುಳಿತು ಅನಗತ್ಯವಾದ ಚಟುವಟಿಕೆಗಳನ್ನು ಮಾಡಬಾರದು. ಅಲ್ಲದೇ, ಸುದ್ದಿ ವಾಹಿನಿಗಳು ಸಹ ಇಂತಹ ಅನಧಿಕೃತ ವಿಡಿಯೋಗಳನ್ನು ಬಳಸಬಾರದು" ಎಂದು ತಿಳಿಸಿದ್ದಾರೆ.
ಮಂಗಳವಾರ ಕೃಷಿ ಕಾಯ್ದೆಗಳ ಚರ್ಚೆಯ ವಿಡಿಯೋವನ್ನು ವಿಪಕ್ಷಗಳ ಕೆಲ ಸದಸ್ಯರು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಹಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು.