ಬೆಂಗಳೂರು, ಫೆ.03 (DaijiworldNews/PY): ಸಿಎಂ ಔತಣಕೂಟಕ್ಕೆ ಗೈರಾಗಿರುವ ಬಗ್ಗೆ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕಾರಣ ನೀಡಿದ್ದು, "ಅನ್ಯ ಕಾರ್ಯದ ನಿಮಿತ್ತ ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದ್ದ ಕಾರಣ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ" ಎಂದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಔತಣಕೂಟಕ್ಕೂ ಮುನ್ನ ಚಿಕ್ಕಮಗಳೂರಿನ ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿದ್ದು, ಮನವಿ ನೀಡಿದ್ದೆ" ಎಂದು ತಿಳಿಸಿದ್ದಾರೆ.
"ಅನ್ಯ ಕಾರ್ಯದ ಸಲುವಾಗಿ ಬೇರೆಡೆಗೆ ಹೋಗಬೇಕಾದ ಅನಿವಾರ್ಯತೆ ಬಂದ ಕಾರಣ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ಸಿಎಂ ಅವರಿಗೆ ತಿಳಿಸಿದ್ದೆ" ಎಂದಿದ್ದಾರೆ.
"ಔತಣಕೂಟಕ್ಕೆ ಗೈರಾದ ಹಿನ್ನೆಲೆ ಬೇರೆ ಕಾರಣ ಹುಡುಕುವ ಅವಶ್ಯಕತೆ ಇಲ್ಲ. ಸಿಎಂ ಹಾಗೂ ನನ್ನ ಮಧ್ಯೆ ಯಾವುದೇ ಮನಸ್ತಾಪವಿಲ್ಲ" ಎಂದು ತಿಳಿಸಿದ್ದಾರೆ.