ಬೆಂಗಳೂರು, ಫೆ.03(DaijiworldNews/HR): ಮಂಗನ ಕಾಯಿಲೆ ಹರಡದಂತೆ ತಡೆಯುವುದಕ್ಕಾಗಿ ಮೆಲಾಥಿಯನ್ ಪುಡಿ ಉಪಯೋಗಿಸುವುದರಿಂದ ಆಗುವ ತೊಂದರೆಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರು ಪ್ರಾಧಿಕಾರಕ್ಕೆ ದೂರು ನೀಡಲು ಹೈಕೋರ್ಟ್ ಸಮ್ಮತಿ ನೀಡಿದೆ.
ಈ ಕುರಿತು ಶಿವಮೊಗ್ಗದ ವಕೀಲ ಕೆ.ಪಿ. ಶ್ರೀಪಾಲ್ ಮತ್ತು ಎನ್.ಜಿ. ರಾಮೇಶಪ್ಪ ಅರ್ಜಿ ಸಲ್ಲಿಸಿದ್ದು, ಇದನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಇನ್ನು ಮೆಲಾಥಿಯನ್ ಪುಡಿಯನ್ನು ಮಂಗಗಳು ಸತ್ತಾಗ ಅದರ ಸುತ್ತಲೂ ಹಾಕಲಾಗುತ್ತಿದ್ದು, ಇದರಿಂದ ಉಳಿದ ಪ್ರಾಣಿಗಳಿಗೂ ಹಾನಿಯಾಗುತ್ತಿದೆ ಎಂಬುದಾಗಿ ಎಂದು ಅರ್ಜಿದಾರರು ದೂರಿದ್ದರು.
ಡಿಸೆಂಬರ್ 2018ರಿಂದ ಈಚೆಗೆ ಮಂಗನ ಕಾಯಿಲೆ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಶಿವಮೊಗ್ಗದ ಸೋಂಕು ಪತ್ತೆ ಪ್ರಯೋಗಾಲಯದ ನಿರ್ದೇಶಕರು ಸಲ್ಲಿಸಿದ್ದ ಅಫಿಡವಿಟ್ ಅನ್ನು ಪೀಠ ಪರಿಶೀಲನೆ ನಡೆಸಿತು ಎನ್ನಲಾಗಿದೆ.