ನವದೆಹಲಿ, ಫೆ.03 (DaijiworldNews/PY): ಸಂಸತ್ತಿನಲ್ಲಿ ರೈತರ ಪ್ರತಿಭಟನೆಯ ವಿಚಾರದ ಬಗ್ಗೆ ಸತತ 15 ಗಂಟೆ ಚರ್ಚಿಸಲು ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದೆ.
ಸರ್ಕಾರವು, ವಿರೋಧ ಪಕ್ಷಗಳೊಂದಿಗಿನ ಮಾತುಕತೆಯಲ್ಲಿ ಚರ್ಚಿಸಲು ಅನುಮೋದನೆ ನೀಡಿದೆ. ರೈತರ ಪ್ರತಿಭಟನೆಯ ವಿಚಾರವಾಗಿ ರಾಜ್ಯಸಭೆಯಲ್ಲಿ ಮ್ಯಾರಥಾನ್ ಚರ್ಚೆ ನಡೆಯಲಿದೆ. ಪ್ರಶ್ನಾವಳಿ ಅವಧಿಯನ್ನು ಎರಡು ದಿನಗಳ ಕಾಲ ರದ್ದುಪಡಿಸಲಾಗಿದೆ.
ಕಳೆದ ಶುಕ್ರವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ನಂತರ ರೈತರ ಪ್ರತಿಭಟನೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಹೇಳಿದ್ದು, ವಿಪಕ್ಷಗಳು ಕೂಡಲೇ ಪ್ರತಿಭಟನೆಗೆ ಮುಂದಾಗಿದ್ದ ಕಾರಣ ಒಪ್ಪಂದ ಪೂರ್ಣಗೊಂಡಿರಲಿಲ್ಲ.
ರೈತರ ಪ್ರತಿಭಟನೆಯ ಬಗ್ಗೆ ಐದು ಗಂಟೆಗಳ ಸ್ವತಂತ್ರ ಚರ್ಚೆಗೆ 16ಕ್ಕೂ ಅಧಿಕ ವಿರೋಧ ಪಕ್ಷಗಳು ಒತ್ತಾಯ ಮಾಡಿದ್ದು, ಚರ್ಚೆಯನ್ನು 15ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ವಿಪಕ್ಷಗಳ ಬೇಡಿಕೆಯನ್ನು ಒಪ್ಪಿದ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
"ಸರ್ಕಾರ ಈ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಕಾರಣ ಚರ್ಚೆ ನಡೆಸಲು ನಾವು ಸಿದ್ದ" ಎಂದು ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.
"ರೈತರ ಬಗ್ಗೆ ಚರ್ಚೆಯು ಧನ್ಯವಾದ ನಿಲುವಳಿಯ ಮುನ್ನ ನಡೆಯದೇ ಇದ್ದಲ್ಲಿ, ಸಮಯ ವಿಸ್ತರಿಸಬೇಕು ಎಂದು ನಾನು ವಿನಂತಿಸುತ್ತೇವೆ" ಎಂದಿದ್ದಾರೆ.