ನವದೆಹಲಿ, ಫೆ.03 (DaijiworldNews/MB) : ನಾವು ಅಕ್ಟೋಬರ್ವರೆಗೂ ಸಮಯ ನೀಡುತ್ತೇವೆ, ಬಳಿಕವೂ ನಮ್ಮ ಮಾತು ಕೇಳದಿದ್ದರೆ ದೇಶವ್ಯಾಪಿ 40 ಲಕ್ಷ ಟ್ರ್ಯಾಕ್ಟರ್ಗಳ ರ್ಯಾಲಿ ನಡೆಸಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಲಿಯ ವಿವಿಧ ಗಡಿಗಳಲ್ಲಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಎಲ್ಲವೂ ವಿಫಲವಾಗಿದೆ. ಈ ನಡುವೆ ಗಣರಾಜ್ಯೋತ್ಸವದ ದಿನ ರೈತರು ನಡೆಸಿದ್ದ ಟ್ಯ್ರಾಕ್ಟರ್ ಪರೇಡ್ ವೇಳೆ ಹಿಂಸಾಚಾರ ನಡೆದಿತ್ತು. ಆ ಬಳಿಕ ಗಡಿಗಳಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಪೊಲೀಸರು ದೆಹಲಿ–ಗಾಜಿಯಾಬಾದ್ ರಾಷ್ಟ್ರೀಯ ಹೆದ್ದಾರಿ–24 ಅನ್ನು ಮುಚ್ಚಿದ್ದಾರೆ.
ಈ ನಡುವೆ ರೈತರು ಪ್ರತಿಭಟಿಸುತ್ತಿರುವ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' (ರಸ್ತೆ ಬಂದ್) ಘೋಷಿಸಿವೆ. ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.
ಏತನ್ಮಧ್ಯೆ ಸರ್ಕಾರಕ್ಕೆ ಅಕ್ಟೋಬರ್ವರೆಗೆ ಸಮಯ ನೀಡುವುದಾಗಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ಹಾಗೂ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಬೇಡಿಕೆ ಈಡೇರದಿದ್ದರೆ, 40 ಲಕ್ಷ ಟ್ರ್ಯಾಕ್ಟರ್ಗಳ ರ್ಯಾಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.