ಬೆಂಗಳೂರು, ಫೆ.03 (DaijiworldNews/MB) : ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ಕರೆದಿದ್ದ ಭೋಜನ ಕೂಟಕ್ಕೆ ಹಲವು ಶಾಸಕರು ಮತ್ತು ಸಚಿವರು ಗೈರಾಗಿದ್ದರು.
ವಿಧಾನಮಂಡಲ ಅಧಿವೇಶನದ ಹಿನ್ನೆಲೆ ಮುಖ್ಯಮಂತ್ರಿಯವರ ನಿವಾಸ "ಕಾವೇರಿ" ಯಲ್ಲಿ ಭೋಜನ ಕೂಟ ಆಯೋಜಿಸಲಾಗಿದ್ದು, ಬಸನಗೌಡ ಪಾಟೀಲ ಯತ್ನಾಳ, ಸುನಿಲ್ ಕುಮಾರ್, ಅರವಿಂದ ಬೆಲ್ಲದ, ಅಪ್ಪಚ್ಚುರಂಜನ್, ತಿಪ್ಪಾರೆಡ್ಡ ಹಾಜರಿರಲಿಲ್ಲ. ಹಾಗೆಯೇ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಆನಂದ್ ಸಿಂಗ್ ಹಾಜರಾಗಿರಲಿಲ್ಲ. ಈ ಪೈಕಿ ಸುನಿಲ್ ಕುಮಾರ್ ಪಕ್ಷದ ಕಾರ್ಯದ ನಿಮಿತ ಕೇರಳಕ್ಕೆ ತೆರಳಿದ್ದು, ತಿಪ್ಪಾರೆಡ್ಡಿಯವರು ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ಚಿತ್ರದುರ್ಗಕ್ಕೆ ಬಂದಿರುವ ಹಿನ್ನೆಲೆ ಅಲ್ಲಿಗೆ ಹೋಗಿದ್ದಾರೆ.
ಇನ್ನು ಇದು ಕೇವಲ ಭೋಜನ ಕೂಟವಾದ ಹಿನ್ನೆಲೆ ಯಾರೊಬ್ಬರಿಗೂ ಚರ್ಚೆಗೆ ಅವಕಾಶವಿರಲಿಲ್ಲ. ಶಾಸಕರು ಒಬ್ಬೊಬ್ಬರಾಗಿ ಬಂದು ಹೋಗಿದ್ದು ಮುಖ್ಯಮಂತ್ರಿ ಎಲ್ಲರ ಬಳಿ ಕುಶಲೋಪರಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.