ಬೆಂಗಳೂರು, ಫೆ.01 (DaijiworldNews/MB) : ಶಿವಮೊಗ್ಗ ಜಿಲ್ಲೆಯ ಹುಣಸೋಡಿನ ಯಶಸ್ ಸ್ಟೋನ್ ಕ್ರಷರ್ನಲ್ಲಿ ನಡೆದ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಜಿಲ್ಲಾಧಿಕಾರಿಗಳು, ಹಿರಿಯ ಭೂವಿಜ್ಞಾನಿಗಳು, ಪೊಲೀಸ್ ಇಲಾಖೆಗೂ ತಿಳಿದಿದೆ. ಯಾರೊಬ್ಬರೂ ಕಾನೂನು ಕ್ರಮ ಜರುಗಿಸದೆ ಕಣ್ಣುಮುಚ್ಚಿ ಕುಳಿತಿರಲು ಕಾರಣವೇನು?'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಶಿವಮೊಗ್ಗ ಜಿಲ್ಲೆಯ ಹುಣಸೋಡಿನ ಯಶಸ್ ಸ್ಟೋನ್ ಕ್ರಷರ್ನಲ್ಲಿ ನಡೆದ ಜಿಲೆಟಿನ್ ಸ್ಪೋಟ ಪ್ರಕರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಹಾಗೂ ಬೇಜವಾಬ್ದಾರಿತನದಿಂದ ಘಟನೆಗೆ ಕಾರಣರಾದ ಜಿಲ್ಲೆಯ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ'' ಎಂದಿದ್ದಾರೆ.
''ಹುಣಸೋಡಿನಲ್ಲಿ ಸುಮಾರು 1350 ಕೆ.ಜಿ ಸ್ಪೋಟಕ ಸ್ಪೋಟಗೊಂಡು 6 ಜನ ಸಾವಿಗೀಡಾಗಿದ್ದಾರೆ, ಹಲವು ಮನೆಗಳಿಗೆ ಹಾನಿಯಾಗಿದೆ, ಸಮೀಪದ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಇದು ಪುಲ್ವಾಮಗಿಂತ ದೊಡ್ಡ ಸ್ಪೋಟ. ಪುಲ್ವಾಮದಲ್ಲಿ 250 ಕೆ.ಜಿ ಸ್ಫೋಟಕ ಸ್ಪೋಟಿಸಿದ್ದರೆ, ಇಲ್ಲಿ ಅದರ 5 ಪಟ್ಟಿಗೂ ಹೆಚ್ಚಿನ ಜಿಲೆಟಿನ್ ಸ್ಪೋಟಗೊಂಡಿದೆ'' ಎಂದು ಹೇಳಿದ್ದಾರೆ.
''ಶಿವಮೊಗ್ಗ ಜಿಲ್ಲೆಯಲ್ಲಿ 97 ಕ್ರಷರ್ಗಳಿಗೆ ಮತ್ತು 76 ಕ್ವಾರಿಗಳಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಪರವಾನಗಿ ಇಲ್ಲದೆ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಕ್ರಷರ್ಗಳು ಕೆಲಸ ಮಾಡುತ್ತಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಅಂದರೆ ಇದಕ್ಕೆ ಯಾರು ಹೊಣೆ?'' ಎಂದು ಕೇಳಿದ್ದಾರೆ.
''ಹುಣಸೋಡಿನ ಯಶಸ್ ಸ್ಟೋನ್ ಕ್ರಷರ್ ಮೇಲೆ 2018ರ ಏಪ್ರಿಲ್ ತಿಂಗಳಿನಲ್ಲೇ ಅನಧಿಕೃತವಾಗಿ ಸ್ಪೋಟಕ ಬಳಕೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಈ ವಿಚಾರ ಜಿಲ್ಲೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಈ ವರೆಗೆ ಗಣಿಗಾರಿಕೆ ಮಾಡಲು ಹೇಗೆ ಅವಕಾಶ ನೀಡಿದರು?'' ಎಂದು ಪ್ರಶ್ನಿಸಿದ್ದಾರೆ.
''ಆಂದ್ರಪ್ರದೇಶದಿಂದ ಪ್ರತೀ 15 ದಿನಕ್ಕೊಮ್ಮೆ ಲಾರಿಯ ಮೂಲಕ ಅಕ್ರಮವಾಗಿ ಸ್ಪೋಟಕ ತರಲಾಗುತ್ತಿದೆ ಅಂತ ಹುಣಸೋಡಿನ ಗ್ರಾಮಸ್ಥರು ದೂರುತ್ತಿದ್ದಾರೆ, ಆಂದ್ರದಿಂದ ಶಿವಮೊಗ್ಗ ನಡುವೆ ಕನಿಷ್ಠ 10 ಪೊಲೀಸ್ ನಾಕಾಬಂಧಿಗಳಿವೆ, ಒಂದು ಕಡೆಯೂ ಈ ಲಾರಿಗಳ ತಪಾಸಣೆ ನಡೆಸಿ, ವಶಕ್ಕೆ ಪಡೆದಿಲ್ಲ ಅಂದರೆ ರಾಜ್ಯದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ?'' ಎಂದು ಕೇಳಿದ್ದಾರೆ.
''ಸ್ವತಃ ಕರ್ನಾಟಕ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಆಯನೂರ್ ಮಂಜುನಾಥ್ ಅವರೇ ಹುಣಸೋಡಿನಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 'ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳೆ ಕಾರಣ' ಎಂದು ಆರೋಪ ಮಾಡಿರುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು'' ಎಂದು ಹೇಳಿದ್ದಾರೆ.
''ಜನವರಿ ತಿಂಗಳ 6ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಹುಣಸೋಡು, ಕಲ್ಲು ಗಂಗೂರು ಪ್ರದೇಶದಲ್ಲಿ ಕಂದಾಯ ಇಲಾಖೆಯು ಗಣಿಗಾರಿಕೆ ಉದ್ದೇಶಕ್ಕೆ ಅನಧಿಕೃತವಾಗಿ ಭೂಮಿ ಮಂಜೂರು ಮಾಡಿದೆ, ಈ ಆದೇಶಗಳನ್ನು ರದ್ದುಪಡಿಸಿ ಎಂದು ಮನವಿ ಮಾಡಿದ್ದರು'' ಎಂದಿದ್ದಾರೆ.
''ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ, ಹಿರಿಯ ಭೂವಿಜ್ಞಾನಿಗಳ ಗಮನಕ್ಕೂ ಬಂದಿದೆ, ಪೊಲೀಸ್ ಇಲಾಖೆಗೂ ತಿಳಿದಿದೆ, ಯಾರೊಬ್ಬರೂ ಕಾನೂನು ಕ್ರಮ ಜರುಗಿಸದೆ ಕಣ್ಣುಮುಚ್ಚಿ ಕುಳಿತಿರಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ?'' ಎಂದು ಪ್ರಶ್ನಿಸಿದ್ದಾರೆ.
''ಹುಣಸೋಡಿನ ಸ್ಪೋಟ ದುರಂತದಲ್ಲಿ ಮಡಿದ 6 ಜನ ಬಡ ಕೂಲಿಕಾರರ ಸಾವಿನ ಹೊಣೆಯನ್ನು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸುಮ್ಮನಿರಿ ಅಂತ ಹೇಳಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹೊರುತ್ತಾರೆಯೇ?'' ಎಂದು ಕೇಳಿದ್ದಾರೆ.
''ಹುಣಸೋಡಿನಲ್ಲಿ ಸಂಭವಿಸಿದ್ದು ಬರಿಯ ಸ್ಪೋಟವಷ್ಟೇ ಅಲ್ಲ, ಅದು ಬಡ ಕೂಲಿಕಾರರ ಕೊಲೆ. ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿರುವ ಸುಮಾರು 2000ಕ್ಕೂ ಅಧಿಕ ಅನಧಿಕೃತ ಕ್ರಷರ್, ಕ್ವಾರಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ'' ಎಂದಿದ್ದಾರೆ.