ಬೆಂಗಳೂರು, ಫೆ.01 (DaijiworldNews/MB) : ಜನಸಾಮಾನ್ಯರಿಗೆ ಈ ಬಜೆಟ್ನಿಂದ ಕಿಂಚಿತ್ತೂ ಲಾಭವಿಲ್ಲ. ಸೆಸ್ಗಳ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ 'ವಸೂಲಿ ಬಜೆಟ್' ಇದು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಟೀಕಿಸಿದ್ದಾರೆ.
2021-22 ನೇ ಸಾಲಿನ ಕೇಂದ್ರ ಬಜೆಟ್ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಈ ಬಾರಿ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ವಿಚಾರಕ್ಕೆ ಸಂಬಂಧಿಸಿ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
''ಕೇಂದ್ರ ಮಂಡಿಸಿರುವ ಬಜೆಟ್ ಡಿಜಿಟಲ್ ಬಜೆಟ್ ಎಂಬುವುದನ್ನು ಬಿಟ್ಟರೆ ಜನರಿಗೆ ನಯಾಪೈಸೆಯ ಉಪಯೋಗವಿಲ್ಲ. ತೈಲ ಬೆಲೆ ಈಗಾಗಲೇ ಜನರ ಜೀವ ಹಿಂಡುತ್ತಿದೆ, ಮತ್ತೆ ಡೀಸೆಲ್ ಮೇಲೆ ₹4, ಪೆಟ್ರೋಲ್ ಮೇಲೆ ₹2.50 ಅಬಕಾರಿ ಸುಂಕ ವಿಧಿಸಿರುವುದು ದುರಂತ. ಸಂಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಕಷ್ಟ ಕೊಡುವ ಸುಲಿಗೆಯ ಬಜೆಟ್ ಇದು'' ಎಂದು ದೂರಿದ್ದಾರೆ.
''ಕೇಂದ್ರದ ಬಜೆಟ್ ಜನರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಆರ್ಥಿಕ ಮುನ್ನೋಟವಿಲ್ಲದ ದೂರದೃಷ್ಟಿ ಕೊರತೆಯ ಬಜೆಟ್ ಇದು. ಸಂಕಷ್ಟದಲ್ಲಿರುವ ಯಾವುದೇ ಉದ್ಯಮದ ಪುನಶ್ಚೇತನಕ್ಕೆ ಈ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ. ನಾಶಕಾರಿ ಬಜೆಟ್ ಮಂಡಿಸಿ ತನ್ನ ದಿವಾಳಿತನ ತೋರಿಸಿಕೊಂಡಿದೆ ಕೇಂದ್ರ ಸರ್ಕಾರ'' ಎಂದು ಹೇಳಿದ್ದಾರೆ.
''ಕೋವಿಡ್ ಕಾಲದಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 20 ಲಕ್ಷ ಕೋಟಿ ಸುಳ್ಳಿನ ಪ್ಯಾಕೇಜ್ಗೂ ಇಂದಿನ ಬಜೆಟ್ಗೂ ವ್ಯತ್ಯಾಸವೇನಿಲ್ಲ. ಈ ಬಾರಿಯ ಬಜೆಟ್ ಪೊಳ್ಳು ಭರವಸೆಯ,ಒಣ ಘೋಷಣೆಯ ಸುಳ್ಳಿನ ಭಂಡಾರವಷ್ಟೆ. ಜನಸಾಮಾನ್ಯರಿಗೆ ಈ ಬಜೆಟ್ನಿಂದ ಕಿಂಚಿತ್ತೂ ಲಾಭವಿಲ್ಲ. ಸೆಸ್ಗಳ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ 'ವಸೂಲಿ ಬಜೆಟ್' ಇದು'' ಎಂದು ಟೀಕಿಸಿದ್ದಾರೆ.