ನವದೆಹಲಿ, ಫೆ.01 (DaijiworldNews/MB) : ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಸಂದರ್ಭ ಮುಂದಿಟ್ಟಿದ್ದು, ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಫೆಬ್ರವರಿ 2ರಿಂದಲೇ ಅನ್ವಯವಾಗಲಿದೆ.
ಸೆಸ್ ವಿಧಿಸುವುದರಿಂದಾಗಿ ಪೆಟ್ರೋಲ್, ಡಿಸೇಲ್ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಆದರೆ, ''ಈ ಸೆಸ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
''ಇದರಿಂದಾಗಿ ಮೂಲ ಅಬಕಾರಿ ಸುಂಕ(ಬಿಇಡಿ) ಹಾಗೂ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ(ಎಸ್ ಎಇಡಿ)ದರಗಳು ಇಳಿಕೆಯಾಗುತ್ತದೆ. ಗ್ರಾಹಕರಿಗೆ ಇದರಿಂದಾಗಿ ಅಧಿಕ ಹೊರೆಯಾಗುವುದಿಲ್ಲ'' ಎಂದು ತಿಳಿಸಿದ್ದಾರೆ.
ಈಗಾಗಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು ಕೇಂದ್ರ ಸರ್ಕಾರದ ಈ ನಿರ್ಧಾರ ವಾಹನ ಸವಾರರಿಗೆ ಮತ್ತಷ್ಟು ತೊಂದರೆ ಉಂಟು ಮಾಡಿದೆ.