ನವದೆಹಲಿ, ಫೆ.01 (DaijiworldNews/MB) : 2021-22 ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದ್ದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಡಿಜಿಟಲ್ ಆಗಿದ್ದು ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಈ ಬಾರಿ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಾಗುತ್ತಿದೆ.
ಕೊರೊನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡನೆ ಮಾಡಲಾಗುತ್ತಿದೆ. ಬಜೆಟ್ ಪ್ರತಿಯು ಆನ್ಲೈನ್ ಆಪ್ನಲ್ಲಿ ಲಭ್ಯವಾಗಲಿದೆ.
ಬಜೆಟ್ ಮಂಡನೆ ಆರಂಭ ಮಾಡಿದ ನಿರ್ಮಲಾರವರು, ''ಈ ಬಜೆಟ್ ಹಿಂದೆಂದೂ ಕಂಡು ಕೇಳರಿಯದಂತಹ ವಿಶಿಷ್ಟ ಸನ್ನಿವೇಶದಲ್ಲಿ ಸಿದ್ದಪಡಿಸಲಾಗಿದೆ'' ಎಂದು ಹೇಳಿದರು.
ಆತ್ಮ ನಿರ್ಭರ ಭಾರತವನ್ನು ಉಲ್ಲೇಖಿಸಿದ ಅವರು, ''ಮೇ 2020 ರಲ್ಲಿ ಸರ್ಕಾರ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಘೋಷಿಸಿದ್ದು ಆರ್ಥಿಕತೆಯ ಚೈತನ್ಯಕ್ಕಾಗಿ ಆತ್ಮನಿರ್ಭರ್ ಪ್ಯಾಕೇಜು ಘೋಷಿಸಿದೆವು. ಆರ್ಬಿಐ ಕೈಗೊಂಡ ಕ್ರಮಗಳೂ ಸೇರಿ ಎಲ್ಲಾ ಪ್ಯಾಕೇಜ್ಗಳ ಆರ್ಥಿಕ ಪರಿಣಾಮಗಳ ಒಟ್ಟು ಮೊತ್ತ ಸುಮಾರು 27.1 ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ'' ಎಂದು ಕೂಡಾ ಹೇಳಿದ್ದಾರೆ.
ಲಸಿಕೆಗಳ ನಿರೀಕ್ಷೆ ಅಧಿಕಯಾಗಿರುವುದಾಗಿಯೂ ಅವರು ಹೇಳಿದ್ದಾರೆ. ಈ ಬಜೆಟ್ ಈ ದಶಕದ ಮೊದಲನೇ ಹಾಗೂ ಡಿಜಿಟಲ್ ಬಜೆಟ್ ಸಹ ಆಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.