ನವದೆಹಲಿ, ಫೆ.01 (DaijiworldNews/MB) : ಕೇಂದ್ರ ಬಜೆಟ್ 2021-22 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ್ದಾರೆ.
10:15 ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂತ್ರಿ ಮಂಡಲ ಸಭೆ ನಡೆದಿದ್ದು ಬಜೆಟ್ ಮಂಡನೆಗೆ ಅನುಮೋದನೆ ದೊರೆತಿದೆ.
ಏತನ್ಮಧ್ಯೆ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜೀತ್ ಸಿಂಗ್ ಕಪ್ಪು ನಿಲುವಂಗಿ ಧರಿಸಿ ಸಂಸತ್ ಪ್ರವೇಶಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎರಡು ತಿಂಗಳುಗಳಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದು ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದೆ.
ಕೊರೊನಾ ಸಾಂಕ್ರಾಮಿಕ ಭಾರತಕ್ಕೆ ಅಪ್ಪಳಿಸಿದ ಬಳಿಕ ಇಂದು ಕೇಂದ್ರದ ಮೊದಲ ಬಜೆಟ್ ಮಂಡನೆ ಇದಾಗಿದ್ದು ಕೊರೊನಾ ಹೊಡೆತಕ್ಕೂ ಮೊದಲೇ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಈ ಬಜೆಟ್ ಲಸಿಕೆಯಾಗಲಿದೆಯೇ ಎಂದು ಕಾದುನೋಡಬೇಕಿದೆ. ಹಾಗೆಯೇ ಈ ಬಜೆಟ್ ಮೇಲೆ ಜನರ ನಿರೀಕ್ಷೆಯೂ ಕೂಡಾ ಎಂದಿಗಿಂತ ಅಧಿಕವಾಗಿದೆ.