ಬೆಳಗಾವಿ, ಫೆ.01 (DaijiworldNews/MB) : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ವಿರುದ್ದ ವಾಗ್ದಾಳಿ ನಡೆಸಿದ ಕರ್ನಾಟಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಮರಾಠ ರಾಜ ಶಿವಾಜಿ 'ಕನ್ನಡಿಗ' ಎಂದು ಹೇಳಿದ್ದಾರೆ.
"ಠಾಕ್ರೆಗೆ ಇತಿಹಾಸ ಗೊತ್ತಿಲ್ಲ. ಶಿವಾಜಿಯ ಪೂರ್ವಜ ಬೆಲ್ಲಿಯಪ್ಪ ಕರ್ನಾಟಕದ ಗದಗ ಜಿಲ್ಲೆಯ ಸೊರತೂರ್ ಮೂಲದ ಕನ್ನಡಿಗ. ಗದಗಕ್ಕೆ ಬರ ಬಂದಾಗ, ಅವರು (ಬೆಲ್ಲಿಯಪ್ಪ) ಮಹಾರಾಷ್ಟ್ರಕ್ಕೆ ವಲಸೆ ಹೋದರು. ಶಿವಾಜಿ ತನ್ನ ಕುಟುಂಬದ ನಾಲ್ಕನೇ ತಲೆಮಾರಿನವನು" ಎಂದು ಹೇಳಿದ್ದಾರೆ.
ಜನವರಿ 27 ರಂದು ಮುಂಬೈನಲ್ಲಿ ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಠಾಕ್ರೆ, ಕರ್ನಾಟಕದ ಬೆಳಗಾವಿ, ಕಾರಾವಾರದಂತಹ ಮರಾಠಿ ಮಾತನಾಡುವ ಜನರ ಪ್ರಾಬಲ್ಯವಿರುವ ಪ್ರದೇಶಗಳನ್ನು 'ಕೇಂದ್ರಾಡಳಿತ ಪ್ರದೇಶ' ಎಂದು ಘೋಷಿಸಬೇಕು ಎಂದು ಹೇಳಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಉದ್ಧವ್ ಠಾಕ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾರಜೋಳ, "ಶಿವಸೇನೆಯ ಐಕಾನ್ ಆಗಿರುವ ಮತ್ತು ಅವರ ಹೆಸರನ್ನೇ ತನ್ನ ಪಕ್ಷಕ್ಕೆ ಇರಿಸಿರುವ ಠಾಕ್ರೆ ಅವರು ಶಿವಾಜಿ ಮೂಲತಃ ಕನ್ನಡಿಗ ಎಂದು ತಿಳಿದಿರಬೇಕು" ಎಂದು ಪುನರುಚ್ಚರಿಸಿದರು.