ಚಿಕ್ಕಮಗಳೂರು, ಫೆ.01 (DaijiworldNews/HR): ಅಪ್ರಾಪ್ತ ಬಾಲಕಿಯ ಮೇಲೆ 17 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಶೃಂಗೇರಿ ಪೊಲೀಸ್ ಠಾಣೆ(ಫೈಲ್ ಫೋಟೋ)
ಸಂತ್ರಸ್ತೆ ಶೃಂಗೇರಿ ತಾಲ್ಲೂಕಿನ ಗೋಚನಹಳ್ಳಿ ಗ್ರಾಮದ 15 ವರ್ಷದ ಬಾಲಕಿಯಾಗಿದ್ದು, ಆಕೆಯ ಮೇಲೆ 17 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಮಿತಿ ತಿಳಿಸಿದೆ.
ಇನ್ನು ಬಾಲಕಿಯ ಮಲತಾಯಿ ಅತ್ಯಾಚಾರಿಗಳಿಗೆ ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಹೆಸರಿಸಲಾದ 17 ಜನರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಾಲಕಿ ಹಾವೇರಿ ಜಿಲ್ಲೆಯ ಶಿಗ್ಗಾಂ ಮೂಲದವಳಾಗಿದ್ದು, ಆಕೆ ತಾಯಿಯನ್ನು ಕಳೆದುಕೊಂಡಿರುವ ಕಾರಣ ಆಕೆಯ ತಂದೆ ಎರಡನೇ ವಿವಾಹವಾಗಿದ್ದಾರೆ. ಹುಡುಗಿ ತನ್ನ ಮಾವನ ಮನೆಯಲ್ಲಿ ಓದುತ್ತಿದ್ದಳು. ಆದರೆ ಕೊರೊನಾ ಲಾಕ್ಡೌನ್ ಸಮಯದಲ್ಲಿ ಶೃಂಗೇರಿಗೆ ಮಲತಾಯಿಯನ್ನು ಭೇಟಿಯಾಗಲು ಬಂದಿದ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದ್ದಾರೆ.