ನವದೆಹಲಿ, ಫೆ.01 (DaijiworldNews/MB) : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಏತನ್ಮಧ್ಯೆ ಕಳೆದ ಎರಡು ತಿಂಗಳುಗಳಿಂದ ದೆಹಲಿಯ ವಿವಿಧ ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಬಜೆಟ್ ಮಂಡನೆಯ ದಿನವಾದ ಇಂದು ಪ್ರತಿಭಟನೆ ತೀವ್ರವಾಗುವ ಸಾಧ್ಯತೆ ಹಿನ್ನೆಲೆ ದೆಹಲಿಯ ಗಡಿಗಳಲ್ಲಿ ಭದ್ರತೆ ಅಧಿಕಗೊಳಿಸಲಾಗಿದೆ.
ರೈತರು ಬ್ಯಾರಿಕೇಡ್ಗಳನ್ನು ದಾಟಿ ಬರದಂತೆ ತಡೆಯಲೆಂದು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ದೆಹಲಿಯ ಗಡಿಗಳಲ್ಲಿ ನಿಯೋಜನೆ ಮಾಡಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021 ರ ಕೇಂದ್ರ ಬಜೆಟ್ನ್ನು ಮಂಡಿಸಲಿದ್ದು ಈಗಾಗಲೇ ಅವರು ಹಣಕಾಸು ಇಲಾಖೆ ಕಚೇರಿಗೆ ಆಗಮಿಸಿದ್ದಾರೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡಾ ಹಣಕಾಸು ಇಲಾಖೆ ಕಚೇರಿಗೆ ಆಗಮಿಸಿದ್ದಾರೆ.
ಇನ್ನು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಇಂದು ತಮ್ಮ ನಿವಾಸದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ಭಾರತಕ್ಕೆ ಅಪ್ಪಳಿಸಿದ ಬಳಿಕ ಇಂದು ಕೇಂದ್ರದ ಮೊದಲ ಬಜೆಟ್ ಮಂಡನೆಯಾಗಲಿದ್ದು ಕೊರೊನಾ ಹೊಡೆತಕ್ಕೂ ಮೊದಲೇ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಈ ಬಜೆಟ್ ಲಸಿಕೆಯಾಗಲಿದೆಯೇ ಎಂದು ಕಾದುನೋಡಬೇಕಿದೆ. ಹಾಗೆಯೇ ಈ ಬಜೆಟ್ ಮೇಲೆ ಜನರ ನಿರೀಕ್ಷೆಯೂ ಕೂಡಾ ಎಂದಿಗಿಂತ ಅಧಿಕವಾಗಿದೆ.