ನವದೆಹಲಿ, ಫೆ.01 (DaijiworldNews/MB) : ಕೊರೊನಾ ಸಾಂಕ್ರಾಮಿಕ ಭಾರತಕ್ಕೆ ಅಪ್ಪಳಿಸಿದ ಬಳಿಕ ಇಂದು ಕೇಂದ್ರದ ಮೊದಲ ಬಜೆಟ್ ಮಂಡನೆಯಾಗಲಿದ್ದು ಕೊರೊನಾ ಹೊಡೆತಕ್ಕೂ ಮೊದಲೇ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಈ ಬಜೆಟ್ ಲಸಿಕೆಯಾಗಲಿದೆಯೇ ಎಂದು ಕಾದುನೋಡಬೇಕಿದೆ.
ದೇಶಾದಾದ್ಯಂತ ನಿರುದ್ಯೋಗ ತಲೆ ಎತ್ತಿ ತಾಂಡವಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ಬಜೆಟ್ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಜನತೆಯಲ್ಲಿ ಅಧಿಕವಾಗಿದೆ. ಸಾಂಕ್ರಾಮಿಕದ ಹೊಡೆತದಿಂದ ಕಂಗಲಾಗಿರುವ ಜನರಿಗೆ ಇಂದಿನ ಬಜೆಟ್ ತೆರಿಗೆಯಲ್ಲಿ ಕಡಿತ ನೀಡುವ ಮೂಲಕ ಕೊಂಚ ರಿಲೀಫ್ ನೀಡಬಹುದೇ ಎಂಬ ನಿರೀಕ್ಷೆಯೂ ಇದೆ.
''ಈ ಬಜೆಟ್ ಸಾಂಕ್ರಾಮಿಕ ಪೀಡಿತ ಆರ್ಥಿಕತೆಗೆ ಆರ್ಥಿಕ ಲಸಿಕೆಯಾಗಲಿದೆ. ಬೇಡಿಕೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಅದೇ ಸಮಯದಲ್ಲಿ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಕ್ರಮ ಕೈಗೊಳ್ಳಲಿದೆ'' ಎಂದು ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಹೇಳಿದೆ.
ಇನ್ನು ಈ ಬಾರಿಯ ಬಜೆಟ್ ಮುಖ್ಯವಾಗಿ 2022 ರ ಆರ್ಥಿಕ ವರ್ಷದಲ್ಲಿ ಕೊರೊನಾ ವ್ಯಾಕ್ಸಿನೇಷನ್ಗೆ ತಗುಲುವ ವೆಚ್ಚಕ್ಕೆ ಆದ್ಯತೆ ನೀಡಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಈ ಬಜೆಟ್ ಹಿಂದೆಂದಿಗಿಂತ ಭಿನ್ನವಾಗಿರಲಿದೆ ಎಂದು ಈ ಹಿಂದೆಯೇ ಹೇಳಿದ್ದು ಈ ನಿಟ್ಟಿನಲ್ಲಿ ಈ ಬಜೆಟ್ನ ಮೇಲಿನ ನಿರೀಕ್ಷೆಯೂ ಕೂಡಾ ಹಿಂದೆಂದಿಗಿಂತಲೂ ಅಧಿಕವಾಗಿದೆ.
ಇನ್ನು ಕೊರೊನಾ ಸಾಂಕ್ರಾಮಿಕ, ಪ್ರವಾಹ, ಬೆಳೆನಷ್ಟದಿಂದ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.