ಜೇಪೋರ್, ಫೆ.01 (DaijiworldNews/MB) : ವ್ಯಕ್ತಿಯೋರ್ವರು ಸಾವನ್ನಪ್ಪಿದ 10 ದಿನಗಳ ನಂತರ ಜರುಗುವ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲು ಛತ್ತೀಸ್ ಗಢದಿಂದ ಜನರು ತೆರಳಿದ್ದ ಪಿಕ್ ಅಪ್ ವ್ಯಾನ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದು 9 ಮಂದಿ ಮೃತಪಟ್ಟು 13 ಮಂದಿಗೆ ಗಾಯವಾದ ಘಟನೆ ಒಡಿಶಾದ ಜೇಪೋರ್ನ ಮುರ್ತಹಂಡಿ ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ 8.45ರ ಸುಮಾರಿಗೆ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾದ ನೈರುತ್ಯ ವಲಯದ ಡಿಐಜಿ ರಾಜೇಶ್ ಪಂಡಿತ್, ''ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಸಮುದಾಯ ಕೇಂದ್ರದಲ್ಲಿ ಸಾವನ್ನಪ್ಪಿದ್ದಾರೆ'' ಎಂದು ತಿಳಿಸಿದ್ದಾರೆ.
ಇನ್ನು ಗಾಯಗೊಂಡ 13 ಮಂದಿಯ ಪೈಕಿ ನಾಲ್ವರನ್ನು ಕೊಟ್ಪಾಡ್ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿದ್ದು ಮತ್ತೆ ಉಳಿದವರು ಮಂದಿ ಜಗ್ದಾಲ್ ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕನು ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದಾನೆ. ವಾಹನದಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.