ದಾವಣಗೆರೆ, .31 (DaijiworldNews/HR): "ಕೇಂದ್ರದ ಬಜೆಟ್ ಸೋಮವಾರ ಮಂಡನೆಯಾಗಲಿದ್ದು, ಅದರಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ಸಿಗಲಿದ್ದು ಉತ್ತಮ ಬಜೆಟ್ ನೀಡುವ ನಿರೀಕ್ಷೆಯಿದೆ" ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬ್ಬಲ್ ಎಂಜಿನ್ ಇದ್ದಂತೆ ಎಂದು ಅಮಿತ್ ಶಾ ಹೇಳಿದ್ದು, ಒಳ್ಳೆಯ ಕೃಷಿ ಬಜೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ. ವಿಶೇಷವಾಗಿ ಕೃಷಿ ವಲಯ ಹಾಗೂ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡುವ ವಿಶ್ವಾಸವಿದೆ. ಕೃಷಿ ಕ್ಷೇತ್ರಕ್ಕೆ ಏನೇನು ಬೇಡಿಕೆಗಳಿವೆ ಎಂಬುದನ್ನು ನಾವು ಈಗಾಗಲೇ ನೀಡಿದ್ದೇವೆ" ಎಂದರು.
ಇನ್ನು ಯುಗಾದಿ ಹಬ್ಬದ ವೇಳೆಗೆ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ್, "ಯತ್ನಾಳ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ, ತೋಳ ಬಂತು ತೋಳ ಎನ್ನುವ ಹಾಗೇ ಅವರು ಮಾತನಾಡುತ್ತಾರೆ ಹಾಗಾಗಿ ಅವರ ಮಾತಿಗೆ ಅಷ್ಟೊಂದು ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.