ಉಡುಪಿ, ಜ.31 (DaijiworldNews/HR): ರಾಜ್ಯದ ನಗರ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್ ಬಸ್ಗಳನ್ನು ಲೀಸ್ಗೆ ಪಡೆದು ಓಡಾಟ ಆರಂಭಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಸಂಚಾರ ಆರಂಭಗೊಳ್ಳಲಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿದ್ದಾರೆ.
395 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಮಾಲಿನ್ಯ ಹೆಚ್ಚಿರುವ ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಬಸ್ಗಳ ಬಳಕೆ ಮಾಡುವ ಕುರಿತಂತೆ ಪ್ರೋತ್ಸಾಹ ನೀಡುತ್ತಿದ್ದು, ಇದಕ್ಕಾಗಿ ಬಸ್ ಖರೀದಿಗೆ 55 ಲಕ್ಷ ರೂ ಸಬ್ಸಿಡಿ ನೀಡಲಿದೆ, ಅದೇ ರೀತಿ ರಾಜ್ಯವೂ ಸಹ ಪ್ರತೀ ಬಸ್ ಗೆ 33 ಲಕ್ಷ ರೂ ಸಬ್ಸಿಡಿ ನೀಡಲಿದ್ದು, ಒಂದು ಎಲೆಕ್ಟ್ರಿಕ್ ಬಸ್ ನ ಬೆಲೆ ರೂ.2 ಕೋಟಿ ಆಗಲಿದ್ದು, ಒಟ್ಟು 88 ಲಕ್ಷ ರೂ ಗಳ ಸಬ್ಸಿಡಿ ದೊರೆಯಲಿದೆ, ಇದರಿಂದ ಇಂದನ ವೆಚ್ಚ ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದ್ದು, ಲಾಭದಾಯಕ ಸಹ ಆಗಲಿದೆ" ಎಂದರು.
ಇನ್ನು "ರಾಜ್ಯದ ಸಾರಿಗೆ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದ್ದು, ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಇಂಧನದಲ್ಲಿ ಶೇ.20 ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ಬಸ್ಗಳ ಇಂಧನ ವೆಚ್ಚ ತಗ್ಗಿಸಲು ಸಾಧ್ಯವಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾರಿಗೆ ಸಂಚಾರ ಇಲ್ಲದಿದ್ದರೂ ಕೂಡ ಸಾರಿಗೆ ನೌಕರರಿಗೆ ವೇತನ ನೀಡಲಾಗಿದೆ, ಇದಕ್ಕಾಗಿ ಸರ್ಕಾರದಿಂದ 2 ತಿಂಗಳ ವೇತನಕ್ಕಾಗಿ 650 ಕೋಟಿ ರೂ ನೆರವು ಪಡೆಯಲಾಗಿದೆ, ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಹ ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ ರಾಜ್ಯದಲ್ಲಿ ಪ್ರಸ್ತುತ 26000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ" ಎಂದು ಹೇಳಿದ್ದಾರೆ.
ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ಹೆಸರು ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಜಿಲ್ಲೆಯ ಟ್ಯಾಕ್ಸಿ ಮಾಲೀಕರು ನೀಡಿರುವ ಮನವಿಗಳ ಬಗ್ಗೆ ಅಧಿವೇಶನ ಸಂದರ್ಭದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಶಾಸಕ ರಘುಪತಿ ಭಟ್ ಮಾತನಾಡಿ, "ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ವ್ಯವಸ್ಥೆ ಅನ್ಯೋನ್ಯತೆಯಿಂದ ನಡೆಯುತ್ತಿದೆ, ಎರಡೂ ವಲಯಗಳಲ್ಲಿ ಅನಾರೋಗ್ಯಕರ ಪೈಪೋಟಿ ನಡೆಸದೇ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು, ನಗರ ವ್ಯಾಪ್ತಿಯಲ್ಲಿನ ಆಟೋ ಗಳಿಗೆ ಅಂತಿಮ ಗಡವು ವಿಧಿಸಿ ಒಂದು ಬಾರಿ ಪರ್ಮಿಟ್ ನೀಡಿ, ಕಲರ್ ಕೋಡಿಂಗ್ ಮಾಡಲು ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.
ಕ.ರಾ.ರ.ಸಾ.ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮಾತನಾಡಿ, "ಸಾರಿಗೆ ನಿಗಮಗಳಿಗೆ ಕೊರೊನಾನಿಂದ ಆದ ಡೀಸೆಲ್ ಬೆಲೆ ಏರಿಕೆ ಇದ್ದರೂ ಸಹ ಬಸ್ ದರ ಹೆಚ್ಚಿಸಿದೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ, ನಿಗಮದ 1.30 ಲಕ್ಷ ನೌಕರರ ವೇತನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ, ಸರ್ಕಾರದ ಸಹಕರದೊಂದಿಗೆ ಸಂಸ್ಥೆಯನು ಸ್ವಾವಲಂಬಿಯನ್ನಾಗಿ ಮಾಡಲಾಗುವುದು" ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಉಡುಪಿ ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್,ಜಿ.ಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕ.ರಾ.ರ.ಸಾ.ನಿಗಮದ ಉಪಾಧ್ಯಕ್ಷ ಈಶ್ವರಪ್ಪ, ಜಿಲ್ಲಾಧಿಕಾರಿ ಜಿ.ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ , ಕ.ರಾ.ರ.ಸಾ.ನಿಗಮದ ನಿರ್ದೇಶಕರುಗಳು ಉಪಸ್ಥಿತರಿದ್ದರು.