ಮೈಸೂರು,ಜ.31 (DaijiworldNews/HR): "ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಹಾಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರು ಮಹಾನಗರಪಾಲಿಕೆ ಮೇಯರ್ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ, ಹಿಂದೆ ಸ್ಥಳೀಯವಾಗಿ ಜೆಡಿಎಸ್ ಜೊತೆ ಮೈತ್ರಿಯಾಗಿತ್ತು. ಈಗ ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶವೇ ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲೂ ಮರುಕಳಿಸುತ್ತದೆ" ಎಂದರು.
ಇನ್ನು "ಬಿಜೆಪಿ ಸರ್ಕಾರದಿಂದ ನಾನು ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲ. ಎಕಾನಾಮಿಕ್ ಸರ್ವೇಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ಜಿಡಿಪಿ ಗಣನೀಯವಾಗಿ ಪಾತಾಳಕ್ಕೆ ಇಳಿದಿದೆ. ಮನಮೋಹನ್ ಸಿಂಗ್ ಅವರ ಬಳಿಕ ಜಿಡಿಪಿ ಪ್ರತಿ ವರ್ಷ ಕುಸಿದಿದ್ದು, 2019-20 ರಲ್ಲಿ ಜಿಡಿಪಿ ಗ್ರೋತ್ 4.2% ಇತ್ತು, ಆ ವೇಳೆ ಕೊರೊನಾ ಇರಲಿಲ್ಲ. ಈ ವರ್ಷ 2020-2021 ರಲ್ಲಿ ಜಿಡಿಪಿ -7.7% ಇದೆ. ಅದನ್ನು ಮುಚ್ಚಿ ಹಾಕಲು 21-22ಕ್ಕೆ 11% ಪರ್ಸೆಂಟ್ ಆಗುತ್ತದೆ ಎನ್ನುತ್ತಿದ್ದಾರೆ" ಎಂದು ಹೇಳಿದ್ದಾರೆ.