ಪುದುಚೇರಿ, ಜ.31 (DaijiworldNews/PY): "ಮುಂದಿನ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಪುದುಚೇರಿಯಲ್ಲಿ ಮೊದಲ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಭ್ರಷ್ಟ ಮುಕ್ತವಾದ ಹಾಗೂ ಅಭಿವೃದ್ದಿ ಕೇಂದ್ರವಾದ ಸರ್ಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರಕ್ಕೇರಲಿದೆ" ಎಂದರು.
"ಸಿಎಂ ವಿ.ನಾರಾಯಣ ಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕ ಭ್ರಷ್ಟಾಚಾರವಿದೆ. ಮುಂದಿನ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 30 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಗೆಲ್ಲಲಿದೆ" ಎಂದು ತಿಳಿಸಿದರು.
"ಪುದುಚೇರಿಯಲ್ಲಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಆಡಳಿತದಡಿ ಶೇ.52 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಲ್ಲದೇ ಇಲ್ಲಿನ ಕಾಲೇಜುಗಳಲ್ಲೂ ಕೂಡಾ ಭ್ರಷ್ಟಾಚಾರ ಹೆಚ್ಚಿದೆ. ಹಲವು ಸಮಯಗಳಿಂದ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೈಗೊಂಡಿಲ್ಲ" ಎಂದರು.
"ಪುದುಚೇರಿಗೆ ಮಾಜಿ ಪ್ರಧಾನಿ ವಾಜಪೇಯಿ ಅವರ ಅಧಿಕಾರದ ಅವಧಿಯಲ್ಲಿ ಕೇಂದ್ರದಿಂದ ಶೇ.70ರಷ್ಟು ಅನುದಾನ ನೀಡಲಾಗಿದ್ದು, ಆದರೆ, ಕೇಂದ್ರದಲ್ಲಿ ನಾರಾಯಣ ಸ್ವಾಮಿ ಅವರು ಸಚಿವರಾಗಿದ್ದ ಸಂದರ್ಭ ಶೇ.30ಕ್ಕೆ ಈ ಅನುದಾನವನ್ನು ಇಳಿಸಲಾಗಿದೆ" ಎಂದು ಹೇಳಿದರು.
ಪುದುಚೇರಿಯ ವಿಧಾನಸಭಾ ಚುನಾವಣೆಯು ಈ ವರ್ಷದ ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.